Home ನಮ್ಮ ಜಿಲ್ಲೆ ಕೊಪ್ಪಳ ಬಿಜೆಪಿಯವರು ರಾಜಕಾರಣ ಮಾಡುವುದು ಸರಿಯಲ್ಲ

ಬಿಜೆಪಿಯವರು ರಾಜಕಾರಣ ಮಾಡುವುದು ಸರಿಯಲ್ಲ

0

ಕೊಪ್ಪಳ: ಮಾಜಿ ಸಿಎಂ ಜಗದೀಶ ಶೆಟ್ಟರ್ ರಾಜಕಾರಣ ಮಾತನಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ‌‌. ಈಗ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಮಾಜಿ ಸಿಎಂ ಬೊಮ್ಮಾಯಿ ಬರುತ್ತಿದ್ದು, ಸಲಹೆ ನೀಡಲಿ. ಆದರೆ ತುಂಗಭದ್ರಾ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ತಾಲ್ಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದಲ್ಲಿ ಸೋಮವಾರ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದರು. ಟಿ.ಬಿ.ಬೋರ್ಡ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರಲಿದ್ದು, ಮೂರು ಅವಧಿಗೆ ಕೇಂದ್ರ ಸರ್ಕಾರ ಬಿಜೆಪಿಯವರದ್ದೆ ಇದ್ದು, ಏನು ಕಿತ್ತಿ ಗುಡ್ಡೆ ಹಾಕಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಲಹೆ ನೀಡಬೇಕು. ಬೊಮ್ಮಾಯಿ ನೀರಾವರಿ ಸಚಿವರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇದೆ‌. ತುಂಗಭದ್ರಾ ಜಲಾಶಯಕ್ಕೆ ಬರಲು ಬೇಡ ಎನ್ನುವುದಿಲ್ಲ. ಬಂದು ವೀಕ್ಷಿಸಿ, ಸಲಹೆ ನೀಡಬೇಕು. ಎಲ್ಲದರಲ್ಲೂ ರಾಜಕಾರಣ ಮಾಡಬೇಡಿ ಎಂದು ಕಿಡಿಕಾರಿದರು.

ಭಾನುವಾರ ಹಗಲು-ರಾತ್ರಿ ತುಂಗಭದ್ರಾ ಜಲಾಶಯದಲ್ಲಿ ನಾವು, ಸಂಸದ ರಾಜಶೇಖರ, ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಜಿಂದಾಲ್ ಕಂಪನಿಯ ತಜ್ಞರ ಜತೆಗೆ ನೀರು ಸಂಗ್ರಹಿಸಿ, ಹೇಗೆ ಗೇಟ್ ನಿರ್ಮಾಣ ಮಾಡಬೇಕು ಎನ್ನುವುದರ ಕುರಿತು ಚರ್ಚಿಸಿದ್ದೇವೆ. ಇದರಿಂದಾಗಿ ಜಿಂದಾಲ್ ನವರು ಗೇಟ್ ತಯಾರಿಸುತ್ತಿದ್ದಾರೆ. ಕ್ರಸ್ಟ್ ಗೇಟ್ ತಜ್ಞ ಕನ್ನಯ್ಯ ನಾಯ್ಡು ಹೈದರಾಬಾದ್ ನಿಂದ ಮಧ್ಯಾಹ್ನ ಆಗಮಿಸಲಿದ್ದಾರೆ. ಬಳಿಕ ಮಧ್ಯಾಹ್ನ ಸಭೆ ನಡೆಸುತ್ತೇವೆ ಎಂದರು.

ಸಂಸದ ಕೆ.ರಾಜಶೇಖರ ಹಿಟ್ನಾಳ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಇದ್ದರು.

Exit mobile version