ಹುಬ್ಬಳ್ಳಿ: ದೇಶದ ಭದ್ರತೆಯ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದಿಲ್ಲ. ಪಹಲ್ಗಾಮ್ ಘಟನೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದೇವೆ. ಆದರೆ, ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ರಾಜಕಾರಣ ಮಾಡುತ್ತಿದೆ. ಯಾರ ಮಾತನ್ನು ಕೇಳಿ ಪಾಕ್ ಮೇಲಿನ ದಾಳಿಯನ್ನು ಕೈ ಬಿಡಲಾಯಿತು? ಇದು ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಟೀಕಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ನಮ್ಮ ಸೈನಿಕರು ಈಗಾಗಲೇ ತಕ್ಕ ಉತ್ತರ ನೀಡಿದ್ದಾರೆ. ಆದರೂ, ಇಂದಲ್ಲ ನಾಳೆ ಪಾಕ್ ಮತ್ತೆ ಬಾಲ ಬಿಚ್ಚಲಿದೆ. ಹೀಗಾಗಿ, ಸಿಕ್ಕ ಅವಕಾಶವನ್ನು ಕೇಂದ್ರ ಸರ್ಕಾರ ಕೈ ಬಿಡಬಾರದಿತ್ತು. ದಿಟ್ಟ ಕ್ರಮಕ್ಕೆ ಮುಂದಾಗಿ ಉಗ್ರ ದೇಶದ ಹುಟ್ಟಡಗಿಸಬೇಕಿತ್ತು ಎಂದರು.
ತಿರಂಗಾ ಯಾತ್ರೆಯಲ್ಲೂ ಬಿಜೆಪಿ ರಾಜಕಾರಣ
ಭಾರತೀಯ ಜನತಾ ಪಕ್ಷದವರು ನಡೆಸುತ್ತಿರುವ ತಿರಂಗಾ ಯಾತ್ರಾ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಲ್ಲಿ ತಿರಂಗಾ ಯಾತ್ರೆ ಆರಂಭಿಸಿದ್ದೇ ನಾವು. ಬಿಜೆಪಿಯವರು ಈಗ ಮಾಡುತ್ತಿದ್ದಾರೆ. ಅದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಿಷಯದಲ್ಲಿ ರಾಜಕಾರಣ ಮಾಡಬಾರದು ಎನ್ನುವುದು ನಮ್ಮ ಆಶಯ ಎಂದರು.
ಸರ್ಕಾರಕ್ಕೆ ಎರಡು ವರ್ಷಗಳು ತುಂಬಿದ್ದು, ವಿಜಯನಗರದ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಎರಡು ವರ್ಷದ ಆಡಳಿತದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. 20ರಂದು ನಡೆಯುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸುರ್ಜೆವಾಲಾ, ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಎಲ್ಲ ಸಚಿವರು, ಶಾಸಕರು, ಮುಖಂಡರು, 3 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. 20ರಂದು ದೊಡ್ಡ ಸಮಾವೇಶ ಮಾಡುತ್ತೇವೆ. ವಿರೋಧ ಪಕ್ಷದವರು ಮೊದಲು ಅವರ ಪಕ್ಷ ಹೇಗಿದೆ ನೋಡಿಕೊಳ್ಳಲಿ. ಯತ್ನಾಳ್ ಕಥೆ ಏನಾಗಿದೆ ಎಂದು ಅವರಿಗೆ ಗೊತ್ತಿಲ್ಲವೆ? ಎಂದ ಅವರು, ರಾಜ್ಯಕ್ಕೆ ಅನುದಾನ ಬರುವಲ್ಲಿ ಕೇಂದ್ರದಿಂದ ಅನ್ಯಾಯ ಆಗುತ್ತಿದೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣ ಬರಬೇಕು. ಮಲತಾಯಿ ಧೋರಣೆ ತೋರಿಸುತ್ತಿದೆ. ಮಹದಾಯಿ ಸೇರಿದಂತೆ ಅನೇಕ ಯೋಜನೆಗಳು ಹಾಗೇ ಇವೆ ಎಂದರು.