Home News ಪೊಲೀಸರ ಮೇಲೆ ದಾಳಿಗೆ ಯತ್ನ: ಆರೋಪಿ ಕಾಲಿಗೆ ಗುಂಡು

ಪೊಲೀಸರ ಮೇಲೆ ದಾಳಿಗೆ ಯತ್ನ: ಆರೋಪಿ ಕಾಲಿಗೆ ಗುಂಡು

ಶಿವಮೊಗ್ಗ: ಪಿಸ್ತೂಲ್ ಮತ್ತು ಮಾರಕಾಸ್ತ್ರದಿಂದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಆರೋಪಿಯೊಬ್ಬನ ಕಾಲಿಗೆ ಭದ್ರಾವತಿಯ ನ್ಯೂಟೌನ್ ಠಾಣೆ ಇನ್ಸ್ಪೆಕ್ಟರ್ ಚಂದ್ರಶೇಖರ್ ಅವರು ಗುಂಡು ಹಾರಿಸಿದ ಘಟನೆ ನಡೆದಿದೆ.
ಆರೋಪಿ ನಸ್ರು ಆಲಿಯಾಸ್ ನಸ್ರುಲ್ಲಾ(೨೧) ಎಂಬಾತನ ಎಡಗಾಲು ಪೊಲೀಸರ ಗುಂಡಿಗೆ ಸೀಳಿದೆ. ಗಾಂಜಾ ಮಾರಾಟ ಪ್ರಕರಣವೊಂದರಲ್ಲಿ ಪರಾರಿಯಾಗಿದ್ದ ನಸ್ರುಲ್ಲಾನನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಲು ತೆರಳಿದ್ದಾಗ ಮಂಗಳವಾರ ಬೆಳಗ್ಗೆ ಪೊಲೀಸರು ಮತ್ತು ಆತನ ಮಧ್ಯೆ ಘರ್ಷಣೆಯಾಗಿದೆ. ಪೊಲೀಸರ ಮೇಲೆ ಆತ ಡ್ರ್ಯಾಗರ್‌ನಿಂದ ದಾಳಿ ನಡೆಸಲು ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಪೊಲೀಸರು ಆತನ ಕಾಲಿಗೆ ಫೈಯರಿಂಗ್ ಮಾಡಿದ್ದಾರೆ. ಓಲ್ಡ್ಟೌನ್ ಠಾಣೆ ಪಿ.ಎಸ್.ಐ.ಚಂದ್ರಶೇಖರ್ ಸೋಮವಾರ ದಾಳಿ ನಡೆಸಿ ೧.೪ ಕೆ.ಜಿ ಗಾಂಜಾ ಸಹಿತ ೪ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಇದರಲ್ಲಿ ನಸ್ರು ಆಲಿಯಾಸ್ ನಸ್ರುಲ್ಲಾ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಮಂಗಳವಾರ ಈತನ ಬಂಧನಕ್ಕೆ ತೆರಳಿದಾಗ ಕಂಟ್ರಿ ಪಿಸ್ತೂಲ್ ಮತ್ತು ಡ್ರ್ಯಾಗ್‌ರ್‌ನಿಂದ ಪೊಲೀಸ್ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪಿ ನಸ್ರುಲ್ಲಾ ಭದ್ರಾವತಿಯ ಅನ್ವರ್ ಕಾಲೋನಿಯ ನಿವಾಸಿಯಾಗಿದ್ದು, ಈತ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ೫ ಪ್ರಕರಣಗಳು ಇದ್ದು, ಮಂಗಳವಾರ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಆರೋಪಿ ಹಾಗೂ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ನಸ್ರು ಬಳಿ ಇದ್ದ ಕಂಟ್ರಿ ಪಿಸ್ತೂಲ್ ಮತ್ತು ಡ್ರ್ಯಾಗರ್‌ನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್.ಪಿ.ಮಿಥುನ್‌ಕುಮಾರ್ ತಿಳಿಸಿದ್ದಾರೆ.

Exit mobile version