ಬೆಂಗಳೂರು: ಹೆಚ್ಚುತ್ತಿರುವ ತಾಪಮಾನದ ನಡುವೆ ಪೂರ್ವ ಮುಂಗಾರು ಮತ್ತಷ್ಟು ಅಬ್ಬರಿಸುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಚೇತರಿಕೆ ಕಂಡಿದೆ. ಜೊತೆಗೆ ಗರಿಷ್ಠ ತಾಪಮಾನವೂ ಏರಿಕೆಯಾಗುತ್ತಿದೆ. ರಾಜ್ಯದ ಕೆಲವೆಡೆ ಚದುರಿದಂತೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುತ್ತಿದೆ. ಅದೇ ರೀತಿ ಗರಿಷ್ಠ ತಾಪಮಾನ ೩೫ ಡಿ.ಸೆಂ.ಗಿಂತಲೂ ಹೆಚ್ಚಾಗುತ್ತಿದ್ದು ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ ಆಸುಪಾಸು ಹಾಗೂ ಅದಕ್ಕಿಂತ ಹೆಚ್ಚು ದಾಖಲಾಗುತ್ತಿದೆ.
ರಾಜ್ಯದಲ್ಲಿ ಈಗಿನ ಸಂದರ್ಭದಲ್ಲಿ ಒಂದೆಡೆ ಮಳೆ, ಮತ್ತೊಂದೆಡೆ ಬಿರುಬಿಸಿಲು ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಬಾಗಲಕೋಟೆ, ಮಡಿಕೇರಿ, ಹುಬ್ಬಳ್ಳಿ, ಮಂಗಳೂರು, ಗದಗ, ಬಳ್ಳಾರಿ, ವಿಜಯನಗರ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಹಲವೆಡೆ ಚದುರಿದಂತೆ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ೫ ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ. ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಸಾಧಾರಣ ಮಳೆಯಾಗುವ ವಾತಾವರಣ ನಿರ್ಮಾಣವಾಗುತ್ತಿದೆ. ಕೆಲವೆಡೆ ಗುಡುಗು, ಮಿಂಚು, ಸಿಡಿಲಿನ ಆರ್ಭಟವೂ ಕಂಡುಬರಲಿದೆ. ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರತಿ ಗಂಟೆಗೆ ೪೦ ರಿಂದ ೫೦ ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಇದರಿಂದ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ
ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸೋಮವಾರದಿಂದ ೩ ದಿನಗಳ ಕಾಲ ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಕೆಲವೆಡೆ ಗುಡುಗು, ಮಿಂಚಿನಿಂದ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ.