ಹುಬ್ಬಳ್ಳಿ: ಕದನ ವಿರಾಮ ಘೋಷಿಸಿದ ಬಳಿಕವೂ ಪಾಕಿಸ್ತಾನ ದಾಳಿ ಮಾಡಿರುವುದು ಸರಿಯಲ್ಲ. ಜಾಗತಿಕ ಮಟ್ಟದ ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಕೆಲ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಪಾಕ್ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಕದನ ವಿರಾಮ ಘೋಷಿಸಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಕದನ ವಿರಾಮಕ್ಕೆ ಮನವಿ ಮಾಡಿದ್ದರು. ಅಮೆರಿಕಾ ಅಧ್ಯಕ್ಷರು ಸಹ ಈ ಕುರಿತು ಭಾರತದ ಜೊತೆ ಚರ್ಚಿಸಿದ್ದರು. ಕದನ ವಿರಾಮ ಘೋಷಿಸಲಾಗಿತ್ತು ಎಂದರು.
ಪಾಕಿಸ್ತಾನ ಮೊದಲಿನಿಂದಲೂ ಭಯೋತ್ಪಾದನಾ ಚಟುವಟಿಕೆಗಳನ್ನು ಬೆಂಬಲಿಸುತ್ತ ಬಂದಿದೆ. ಪಾಕಿಸ್ತಾನದ್ದು ಎಂದಿಗೂ ಇಬ್ಬಗೆಯ ನೀತಿ. ಅಲ್ಲಿಯ ಮಿಲಿಟರಿ ಪಡೆ ಚುನಾಯಿತಿ ಸರ್ಕಾರದ ಮಾತು ಎಂದಿಗೂ ಕೇಳಲ್ಲ. ಎರಡು-ಮೂರು ದಿನಗಳಿಂದ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ ಸೈನಿಕರು, ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ. ನಮ್ಮ ಮಿಲಿಟರಿ ಪಡೆಗೆ ಎಲ್ಲ ಸ್ವಾತಂತ್ರ್ಯ ಕೊಡಲಾಗಿತ್ತು. ಸಂಘರ್ಷದಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿವೆ. ದೇಶದ ರಕ್ಷಣೆ ವಿಷಯದಲ್ಲಿ ನಾವು ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.
ಕಂದಹಾರ್‌ನಲ್ಲಿ ನಡೆದ ದಾಳಿಯಲ್ಲಿ, ಅನೇಕ ಭಯೋತ್ಪಾದಕರು ಹಾಗೂ ಅವರ ಕುಟುಂಬದವರು, ಸಂಬಂಧಿಕರು ಮೃತಪಟ್ಟಿದ್ದಾರೆ. ಮೋಸ್ಟ್ ವಾಂಟೆಂಡ್ ಉಗ್ರರರು ಸಹ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಿಚಾರದ ಕುರಿತು ಕೆಲವು ಬಾರಿ ಆಡಳಿತಾತ್ಮಕವಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಕುರಿತು ವಿದೇಶಾಂಗ ಸಚಿವರು ಹೆಚ್ಚಿನ ಮಾಹಿತಿ ನೀಡುತ್ತಾರೆ ಎಂದರು.