Home ತಾಜಾ ಸುದ್ದಿ ಪರಮೇಶ್ವರ್ ಪ್ರಬುದ್ಧರಿದ್ದಾರೆ; ರಾಹುಲ್ ಗಾಂಧಿ ರೀತಿ ಮಾತಾಡಿದರೆ ಹೇಗೆ?

ಪರಮೇಶ್ವರ್ ಪ್ರಬುದ್ಧರಿದ್ದಾರೆ; ರಾಹುಲ್ ಗಾಂಧಿ ರೀತಿ ಮಾತಾಡಿದರೆ ಹೇಗೆ?

0

ಮಹಾರಾಷ್ಟ್ರ ಕಾಂಗ್ರೆಸ್ ಸೋಲಿಗೆ ಇವಿಎಂ ದೋಷ ಎಂದ ಜಿ.ಪರಮೇಶ್ವರ್ ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ

ನವದೆಹಲಿ: ಕರ್ನಾಟಕ ಗೃಹ ಮಂತ್ರಿ ಜಿ.ಪರಮೇಶ್ವರ ಪ್ರಜ್ಞಾವಂತ, ಪ್ರಬುದ್ಧ ರಾಜಕಾರಣಿ. ಅವರೂ ರಾಹುಲ್ ಗಾಂಧಿಯಂತೆ ಮಾತನಾಡಿದರೆ ಹೇಗೆ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಸಂಸತ್ ಚಳಿಗಾಲದ ಅಧಿವೇಶನಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದರು.

ರಾಜ್ಯದಲ್ಲಿ ಪರಮೇಶ್ವರ್ ಒಬ್ಬ ಪ್ರಬುದ್ಧ ರಾಜಕಾರಣಿ ಇದ್ದಾರೆ. ಅವರೂ ಹೀಗೆ ಇವಿಎಂ ಮೇಲೆ ಅನುಮಾನವಿದೆ ಎನ್ನುವುದು ಸರಿ ಕಾಣುವುದಿಲ್ಲ ಎಂದು ಜೋಶಿ ಪ್ರತಿಕ್ರಿಯಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 135 ಸೀಟುಗಳಿಂದ ಗೆದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಇವರಿಗೆ ಆಗ ಇಲ್ಲದ ಇವಿಎಂ ಮೇಲಿನ ಅನುಮಾನ ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಾಕ್ಷಣ ಬರುತ್ತದೆ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಪರಮೇಶ್ವರ್ ಹೇಳಿಕೆ ಅರ್ಥಹೀನ: ಮಹಾರಾಷ್ಟ್ರದಲ್ಲಿ ಇವಿಎಂ ಗೋಲ್ ಮಾಲ್ ಆಗಿದೆ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಆರೋಪವನ್ನು ತಳ್ಳಿಹಾಕಿದ ಕೇಂದ್ರ ಸಚಿವ ಜೋಶಿ, ಇವಿಎಂ ದೋಷದಿಂದಲೇ ಮಹಾರಾಷ್ಟ್ರ ಚುನಾವಣೆಯನ್ನು ಕಾಂಗ್ರೆಸ್ ಸೋತಿದೆ ಎಂದಿರುವ ಅವರ ಹೇಳಿಕೆ ನಿಜಕ್ಕೂ ಅರ್ಥಹೀನ ಎಂದು ಟೀಕಿಸಿದರು.

ಜಾರ್ಖಂಡ್ ಹೇಗೆ ಗೆದ್ದರು?: ಮಹಾರಾಷ್ಟ್ರ ಸಾಲಿಗೆ ಇವಿಎಂ ದೋಷ ಎನ್ನುವುದಾದರೆ ಕಾಂಗ್ರೆಸ್ ಝಾರ್ಖಂಡ್ ನಲ್ಲಿ ಹೇಗೆ ಗೆದ್ದಿತು? ಎಂದು ಪ್ರಶ್ನಿಸಿದ ಸಚಿವ ಜೋಶಿ, ಸೋತ ಕಾರಣಕ್ಕೆ ಈ ರೀತಿ ಅಪ್ರಬುದ್ಧರಂತೆ ಮಾತಾಡಬಾರದು ಎಂದರು.

ರಾಜ್ಯ ರಾಜಕಾರಣದಲ್ಲಿ ಪರಮೇಶ್ವರ್ ಅವರು ಒಬ್ಬ ಗೌರವಾನ್ವಿತ ವರಿಷ್ಠರಾಗಿದ್ದರು. ಈಗ ಅವರೂ ರಾಹುಲ್ ಗಾಂಧಿ ಅವರಂತೆ ಮಾತನಾಡಲು ಆರಂಭಿಸಿದ್ದಾರೆ ಎಂದು ಪ್ರಲ್ಹಾದ ಜೋಶಿ ಟೀಕಿಸಿದರು.

Exit mobile version