Home ಸಂಪಾದಕೀಯ ಪಟಾಕಿ ನಿಷೇಧ ಕುರಿತು ಸ್ಪಷ್ಟ ನಿಯಮ ಅಗತ್ಯ

ಪಟಾಕಿ ನಿಷೇಧ ಕುರಿತು ಸ್ಪಷ್ಟ ನಿಯಮ ಅಗತ್ಯ

0

ಸುಪ್ರೀಂ ಕೋರ್ಟ್ ಆದೇಶದಂತೆ ವಿಷಕಾರಿ ಪಟಾಕಿ ನಿಷೇಧಿಸಬೇಕು. ಅದಕ್ಕೆ ರಿಯಾಯತಿ ನೀಡಲು ಅವಕಾಶವೇ ಇಲ್ಲ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಇಬ್ಬದಿಯ ನೀತಿ ಅನುಸರಿಸುವುದು ಸರಿಯಲ್ಲ.

ಅತ್ತಿಬೆಲೆಯಲ್ಲಿ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಬೆಂಕಿ ಅಪಘಾತ ಸಂಭವಿಸಿ ೧೬ ಜನ ಸಾವನ್ನಪ್ಪಿದ ಮೇಲೆ ಸುಪ್ರೀಂ ಕೋರ್ಟ್ ಆದೇಶದಂತೆ ಪಟಾಕಿ ನಿಷೇಧವನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ದೀಪಾವಳಿ ಸಮೀಪಿಸುತ್ತಿದೆ. ಸರ್ಕಾರ ಸ್ಪಷ್ಟ ನೀತಿಯನ್ನು ಪ್ರಕಟಿಸಿಲ್ಲ. ಪಟಾಕಿಯ ಬಳಕೆಯನ್ನೇ ನಿಷೇಧಿಸುವ ಹಾಗಿದ್ದರೆ ಪಟಾಕಿ ಅಂಗಡಿಗೆ ಲೈಸೆನ್ಸ್ ನೀಡಬಾರದು. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ಕೊಡಬೇಕು. ಅಕ್ರಮವಾಗಿ ವಿಷಕಾರಿ ಪಟಾಕಿ ಮಾರಾಟ ಮಾಡಿದರೆ ಏನು ಕ್ರಮ ಕೈಗೊಳ್ಳಲಾಗುವುದು ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ನಿಷೇಧಿತ ಪಟಾಕಿಯನ್ನು ಜನಸಾಮಾನ್ಯರು ಬಳಸಿದರೆ ಅವರ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆಯೇ? ಪಟಾಕಿ ಮಾರಾಟಕ್ಕೆ ಎಲ್ಲೂ ಬಿಲ್ ಕೊಡುವುದಿಲ್ಲ. ದೀಪಾವಳಿ ಹಬ್ಬದ ಹಿಂದಿನ ದಿನ ಜನಸಾಮಾನ್ಯರು ಪಟಾಕಿ ಖರೀದಿ ಮಾಡುತ್ತಾರೆ. ಅವರಿಗೆ ಹಸಿರು ಪಟಾಕಿ ಮಾತ್ರ ಖರೀದಿ ಮಾಡಲು ಹೇಳಿದರೂ ಅವರಿಗೆ ಹಸಿರು ಪಟಾಕಿ ಯಾವುದು ಎಂಬುದು ತಿಳಿಯುವುದು ಹೇಗೆ?
ಹಿಂದೆ ಕಳೆದ ಎರಡು ವರ್ಷಗಳಿಂದ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ಕೆಲಸ ನಿರಾತಂಕವಾಗಿ ನಡೆಯುತ್ತ ಬಂದಿದೆ. ತಮಿಳುನಾಡಿನ ಶಿವಕಾಶಿಯಲ್ಲಿ ಈಗಲೂ ನಿಷೇಧಿತ ಪಟಾಕಿ ಉತ್ಪಾದನೆಯಾಗುತ್ತಿದೆ.ಅಲ್ಲಿಂದ ಕರ್ನಾಟಕಕ್ಕೆ ಅನಧಿಕೃತವಾಗಿ ಪಟಾಕಿ ಬರುತ್ತಿದೆ. ಇದನ್ನು ತಡೆಗಟ್ಟುವವರು ಯಾರು? ಸುಪ್ರೀಂ ಕೋರ್ಟ್ ಅಪಾಯಕಾರಿ ಪಟಾಕಿ ನಿಷೇಧಿಸಿದ ಮೇಲೆ ಅದು ತಮಿಳುನಾಡಿಗೆ ಅನ್ವಯಿಸುವುದಿಲ್ಲವೆ? ಇತ್ತೀಚೆಗೆ ತಮಿಳುನಾಡಿನಲ್ಲೂ ಪಟಾಕಿಗೆ ಬೆಂಕಿ ಬಿದ್ದು ಸಾವು ನೋವು ಸಂಭವಿಸಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಳೆಯದೇ ಇರುವಾಗ ಭ್ರಷ್ಟಾಚಾರಕ್ಕೆ ಇದು ಎಡೆಮಾಡಿಕೊಡುತ್ತಿದೆ. ಹಸಿರು ಪಟಾಕಿಯನ್ನು ಬಳಸುವುದಕ್ಕೆ ಯಾವ ನಿರ್ಬಂಧವೂ ಇಲ್ಲ. ಆದರೆ ಇದು ಜನರನ್ನು ಆಕರ್ಷಿಸುವುದಿಲ್ಲ. ಅತ್ಯಂತ ಅಪಾಯಕಾರಿ ಬೇರಿಯಂ ನೈಟ್ರೇಟ್ ಇಲ್ಲದ ಹಸಿರು ಪಟಾಕಿ ಬಳಕೆ ಕಡ್ಡಾಯವಾಗದೇ ಇದ್ದಲ್ಲಿ ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಬರುವುದೇ ಇಲ್ಲ. ಹಸಿರು ಪಟಾಕಿಯನ್ನು ಸಿಎಸ್‌ಐಆರ್ ಮತ್ತು ನೀರಿ ಸಂಸ್ಥೆ ತಯಾರಿಸಿದೆ. ಇದನ್ನು ಬಳಸಿದರೆ ವಿಷಕಾರಿ ಅನಿಲ ಪರಿಸರವನ್ನು ಸೇರುವುದಿಲ್ಲ. ಅಲ್ಲದೆ ಶಬ್ದಮಾಲಿನ್ಯವೂ ನಿಯಂತ್ರಣದಲ್ಲಿರುತ್ತದೆ. ಜನರ ಆರೋಗ್ಯ ಕಾಪಾಡುವ ಪಟಾಕಿಗೆ ಬೇಡಿಕೆ ಇರುವುದಿಲ್ಲ ಎಂಬುದು ಆಶ್ಚರ್ಯಕರವಾಗಿ ಕಂಡರೂ ನಿಜ. ಜನ ಅತಿ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಬಳಸಬೇಕೆಂದು ಬಯಸುತ್ತಾರೆ. ಎಷ್ಟೋ ನಗರಗಳಲ್ಲಿ ಪಟಾಕಿ ಬಳಸುವುದು ಶ್ರೀಮಂತಿಕೆಯ ಸಂಕೇತವೂ ಆಗಿದೆ. ಜನ ರಸ್ತೆಯಲ್ಲಿ ಓಡಾಡುವುದು ಕಷ್ಟವಾದರೂ ಪಟಾಕಿ ಬಳಸುವವರು ಇದರ ಬಗ್ಗೆ ಚಿಂತಿಸುವುದೇ ಇಲ್ಲ. ಆದಿನ ಹೊರಗೆ ಓಡಾಡುವುದೇ ಅಪರಾಧ ಎಂಬಂತೆ ಪಟಾಕಿ ಬಳಸುವವರು ವಾದ ಮಾಡುವುದುಂಟು. ದೀಪಾವಳಿ ಹಬ್ಬದ ದಿನ ಪಟಾಕಿ ಬಳಸುವುದಕ್ಕೆ ಸಮಯವನ್ನು ಸರ್ಕಾರ ನಿಗದಿಪಡಿಸುತ್ತದೆ. ಆದರೆ ಅದನ್ನು ಯಾರೂ ಪಾಲಿಸುವುದೇ ಇಲ್ಲ. ಶ್ವಾಸಕೋಶದ ತೊಂದರೆ ಇರುವವರು ಹಾಗೂ ವೃದ್ಧರು ನಗರಗಳನ್ನು ಬಿಟ್ಟು ಹಳ್ಳಿಗಳತ್ತ ಹೆಜ್ಜೆ ಹಾಕುವುದು ಅನಿವಾರ್ಯ. ಗ್ರಾಮೀಣ ಪ್ರದೇಶದಲ್ಲಿ ಪಟಾಕಿ ಬಳಸುವವರ ಸಂಖ್ಯೆ ಕಡಿಮೆ ಇರುವುದರಿಂದ ಶಬ್ದ ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಕಡಿಮೆ ಇರುತ್ತದೆ. ಸರ್ಕಾರದ ಅಸ್ಪಷ್ಟ ನೀತಿ ಜನಸಾಮಾನ್ಯರಿಗೆ ಕಷ್ಟದ ದಿನಗಳನ್ನು ಸೃಷ್ಟಿಸುತ್ತದೆ. ಅನಗತ್ಯ ವಿವಾದಗಳು. ಸಂಘರ್ಷಗಳಿಗೆ ಕಾರಣವಾಗುತ್ತದೆ. ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ನೀತಿಯನ್ನು ಪ್ರಕಟಿಸಿದರೆ ಅದರಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು.
ಸುಪ್ರೀಂ ಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸಬೇಕು. ಇಲ್ಲವೆ ಆದೇಶ ಪಾಲಿಸುವುದಕ್ಕೆ ಇರುವ ಕಷ್ಟವನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಎರಡೂ ಕೆಲಸ ಮಾಡದೆ ಅಪಘಾತ ಸಂಭವಿಸಿದಾಗ ತನಿಖೆಗೆ ಆದೇಶ ನೀಡಿದರೆ ಅದು ಕಣ್ಣೊರೆಸುವ ತಂತ್ರವಾಗಬಹುದೇ ಹೊರತು ಜನಪರವಂತೂ ಆಗುವುದಿಲ್ಲ. ಪಟಾಕಿ ಬಳಸುವ ಪದ್ಧತಿಯೇ ತಪ್ಪು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು.ಹಬ್ಬದ ಆಚರಣೆಗೆ ಬೇರೆ ಮಾರ್ಗಗಳಿವೆ. ಬಾಣಬಿರುಸು ಬಳಕೆ ಅತ್ಯಂತ ಪ್ರಾಚೀನ. ಅದನ್ನು ಈಗಲೂ ಮುಂದುವರಿಸುವ ಅಗತ್ಯವೇನೂ ಇಲ್ಲ. ಪರಿಸರ ಮತ್ತು ಜನರ ಆರೋಗ್ಯ ಎಲ್ಲಕ್ಕಿಂತ ಮುಖ್ಯ.

Exit mobile version