Home ಸಂಸ್ಕೃತಿ ಸಂಪದ ನೆಮ್ಮದಿ ಬದುಕಿಗೆ ಮುಷ್ಟಿ ಅನ್ನ ಸಾಕು

ನೆಮ್ಮದಿ ಬದುಕಿಗೆ ಮುಷ್ಟಿ ಅನ್ನ ಸಾಕು

0

ಮಾನವನಲ್ಲಿ ವಸ್ತುಗಳು ಹಾಗೂ ಹಣದ ಬಗೆಗಿನ ವ್ಯಾಮೋಹ ತೀರುತ್ತಿಲ್ಲ ಜೀವನದ ಸುಖ-ಸಂತೋಷ ನೆಮ್ಮದಿಯನ್ನು ವಸ್ತುಗಳಲ್ಲಿ, ಹಣ, ಅಂತಸ್ತಿನಲ್ಲಿ ಹುಡುಕುತ್ತಿರುವ ಆಧುನಿಕ ಮಾನವ ಅಗತ್ಯಕ್ಕಿಂತ ಹೆಚ್ಚೆಚ್ಚು ಸಂಗ್ರಹಿಸುವ ಆ ಮೂಲಕ ಇತರರ ಬಳಿ ಇಲ್ಲದುದೆಲ್ಲಾ ನನ್ನ ಬಳಿ ಇದೆ ಎಂದು ಒಣ ಪ್ರತಿಷ್ಠೆಯಲ್ಲಿ ಹೊರಳಾಡುವ ಮೂಲಕ ವಿನಾಕಾರಣ ಸಂತೋಷ ಪಡುವಂತ ವಿಕೃತಿಯನ್ನು ಬೆಳೆಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎನಿಸುತ್ತಿದೆ.
ಈ ಮಾತಿಗೆ ಇತ್ತೀಚಿನ ಉದಾಹರಣೆ ಎಂಬಂತೆ ಶಿವಮೊಗ್ಗದ ಸರ್ಕಾರಿ ಎಂಜಿನಿಯರ್ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧ ಕೈಗೊಂಡಾಗ ದೊರೆತ ವಸ್ತುಗಳು, ಹಣ, ಆಭರಣದ ರಾಶಿಯನ್ನು ಮಾಧ್ಯಮಗಳ ಮೂಲಕ ನೋಡಿದಾಗ ಅತ್ಯಾಶ್ಚರ್ಯವಾಯಿತು. ಮನೆಯಲ್ಲಿ ಇರುವ ನಾಲ್ಕು ಮಂದಿಗೆ ನೂರಾರು ಕೈಗಡಿಯಾರಗಳು, ನೂರಾರು ಬಗೆಯ ಚಪ್ಪಲಿಗಳು, ಸಾವಿರಾರು ಜೊತೆ ಬಟ್ಟೆಗಳು, ಕೆ.ಜಿ. ಗಟ್ಟಲೆ ಚಿನ್ನ, ಬೆಳ್ಳಿಯ ಆಭರಣಗಳು ಅವಶ್ಯಕತೆಯಿದೆಯಾ ಎನ್ನುವ ಕುರಿತು ಜಿಜ್ಞಾಸೆ ಉಂಟಾಗದಿರದು. ನ್ಯಾಯಯುತ ಮಾರ್ಗದಲ್ಲಿ ಎಷ್ಟಾದರೂ ಹಣ, ಆಸ್ತಿ ಸಂಪಾದಿಸಲಿ ಆದರೆ ದುರ್ಮಾರ್ಗದ ಮೂಲಕ ಅಧರ್ಮದ ಹಾದಿಯ ಮೂಲಕ ಸಂಪಾದಿಸುವ ಇಂತಹ ಸ್ವತ್ತು ಸಂಗ್ರಹಿಸಿ ಸಾಧಿಸುವುದಾದರೂ ಏನಿದೆ? ಜಗತ್ತಿನಲ್ಲಿ ಪ್ರಸ್ತುತ ಸಂದರ್ಭದಲ್ಲಿ ಅಂದಿನ ಅನ್ನವನ್ನು ಅಂದೆಯೇ ದುಡಿದು ಉಣ್ಣುವ ಕೋಟ್ಯಂತರ ಜನರಿದ್ದಾರೆ ಹಣ, ಅಂತಸ್ತಿಗಾಗಿ ಎಲ್ಲರೂ ಅನ್ಯಾಯದ ಹಾದಿ ಹಿಡಿದರೆ ಸಮಾಜದಲ್ಲಿ ಕಿಂಚಿತ್ತಾದರೂ ನೆಮ್ಮದಿ, ನೈತಿಕತೆ ಉಳಿಯವುದೇ? ಎನ್ನುವುದನ್ನು ನಾವುಗಳು ಯೋಚಿಸಬೇಕು ಮನುಷ್ಯನ ಬಳಿ ಖಜಾನೆಯು ತುಂಬಿ ತುಳುಕಾಡಲಿ ತಿನ್ನುವುದು ಮಾತ್ರ ಮುಷ್ಟಿ ಅನ್ನ ಮಾತ್ರ ಎನ್ನುವ ಅಂತಿಮ ಸತ್ಯವನ್ನು ಅರ್ಥ ಮಾಡಿಕೊಂಡು ಬದುಕಿದಾಗ ಮಾತ್ರ ಜೀವನಕ್ಕೊಂದು ಅರ್ಥ ಇಲ್ಲದಿದ್ದರೆ ಅನರ್ಥ.

Exit mobile version