Home News ತೀರ್ಪಿಗೆ ಕಾಯುವುದು ಪ್ರಸವ ವೇದನೆ

ತೀರ್ಪಿಗೆ ಕಾಯುವುದು ಪ್ರಸವ ವೇದನೆ

ಒಂದು ಪ್ರಕರಣ ದಾಖಲಾಗಿ ಸಾಕ್ಷಿ, ಪುರಾವೆ, ವಾದ ಪ್ರತಿವಾದ ವಿಚಾರಣೆ ನಡೆದು ಕೊನೆಯದಾಗಿ ಪಡೆಯುವ ತೀರ್ಪು, ಒಬ್ಬ ಹೆಣ್ಣು ಮಗಳು ತನ್ನ ಗರ್ಭದಲ್ಲಿ ಮಗುವನ್ನು ಪೋಷಿಸಿ, ಬೆಳೆಸಿ ಪ್ರೀತಿಸಿ ಕೊನೆಗೆ ಪ್ರಸವ ವೇದನೆ ಅನುಭವಿಸಿ, ಮಗು ಸುರಳಿತವಾಗಿ ಜಗತ್ತನ್ನು ಕಾಣುವುದನ್ನು ಆತುರವಾಗಿ ಕಾಯುವಂತೆ ಕಕ್ಷಿದಾರರ ಪರಿಸ್ಥಿತಿ ಆಗಿರುತ್ತದೆ.
ತೀರ್ಪು ಪ್ರಕಟವಾಗುವ ದಿನ ಕಕ್ಷಿದಾರರು/ ಪ್ರತಿವಾದಿಗಳು ನ್ಯಾಯಾಲಯದ ಆವರಣದಲ್ಲಿ, ಮನದಲ್ಲಿ ದುಗುಡವನ್ನು ಕಟ್ಟಿಕೊಂಡು, ತಮ್ಮ ದೈನಂದಿನ ಜೀವನಕ್ಕೆ ಆಸರಕ್ಕೆ ನೀಡುವ ಸ್ವತ್ತು ತನ್ನ ಕೈತಪ್ಪುವುದೆ? ಇಲ್ಲವೇ ನನ್ನ ಜೀವನಕ್ಕೆ ಆಧಾರವಾಗಿ ಉಳಿಯುವುದೆ? ಎಂದು ಅತ್ತಿತ್ತ ಸುಳಿದಾಡುವವರ ಪರಿಸ್ಥಿತಿ ಮನಸು ಹಿಂಡುತ್ತದೆ. ಕಕ್ಷಿದಾರರು ವಿನಮ್ರತೆಯಿಂದ ಕೈಮುಗಿದು ನ್ಯಾಯ ಪೀಠದ ಮುಂದೆ ನಿಂತರು. ನ್ಯಾಯಾಲಯ ತೀರ್ಪನ್ನು ಉಚ್ಚರಿಸಿ, ವಾದಿಯ ದಾವೆಯನ್ನು ಭಾಗಶಃ ಪುರಸ್ಕರಿಸಿ ತೀರ್ಪನ್ನು ನೀಡಿತು. ವಾದಿಯ ಬೇಡಿಕೆ, ೧ನೇ ಪ್ರತಿವಾದಿ ತನಗೆ ಕ್ರಯಪತ್ರ ಬರೆದುಕೊಡುವಂತೆ ನಿರ್ದೇಶಿಸಿ ಕೋರುವ, ಒಪ್ಪಂದದ ನಿರ್ದಿಷ್ಟ ಕಾರ್ಯಕ್ಷಮತೆ ಪ್ರಾರ್ಥನೆಯನ್ನು ತಿರಸ್ಕರಿಸಿ, ಪ್ರತಿವಾದಿಯರು ವಾದಿಗೆ ಮುಂಗಡ ಹಣ ರೂ. ೧ ಲಕ್ಷ ಮರಳಿ ಕೊಡುವಂತೆ ಆದೇಶ ಮಾಡಿತು. ಕಕ್ಷಿದಾರ ಮುಖದಲ್ಲಿ ಗೆಲುವಿನ ಸಂತಸದ ನಗೆ ಮೂಡಿತು.
ನ್ಯಾಯಾಲಯದ ತೀರ್ಪನ್ನು ಪರಿಶೀಲಿಸಿದೆ. ಅದರ ಸಂಕ್ಷಿಪ್ತ ಪಾಠ ಹೀಗಿದೆ. ಮೊದಲಿಗೆ ವಾದಿ ದಾಖಲಿಸಿದ ನಿರ್ದಿಷ್ಟ ಒಪ್ಪಂದ ಕರಾರು ದಾವೆಯ ಸಂಕ್ಷಿಪ್ತ ಸಂಗತಿಗಳನ್ನು ದಾಖಲಿಸಿತ್ತು. ವಾದಿಯು ಸಲ್ಲಿಸಿದ ವಾದಪತ್ರದ ಸಂಗತಿಗಳಂತೆ, ಪ್ರತಿವಾದಿಯು ದಾವೆ ಜಮೀನಿನ ಮಾಲೀಕನು ಇರುತ್ತಾನೆ. ಪ್ರತಿವಾದಿಗೆ ದಾವೆ ಜಮೀನು ಕರ್ನಾಟಕ ಭೂ ಸುಧಾರಣೆ ಕಾನೂನಿನ ಅನ್ವಯ ಭೂನ್ಯಾಯ ಮಂಡಳಿ ಆದಿ ಭೋಗದಾರ/ಟೆನೆಂಟ್ ಎಂದು ಆದೇಶಿಸಿ, ೧೫ ವರ್ಷದವರೆಗೆ ಪರಭಾರೆ ಮಾಡಬಾರದು ಅನ್ನುವ ಷರತ್ತು ವಿಧಿಸಿತ್ತು. ಅವಧಿ ಮುಗಿದನಂತರ, ಪ್ರತಿವಾದಿ ತನ್ನ ಮನೆತನದ ಅಡಚಣೆ ಸಲುವಾಗಿ ದಾವೆ ಜಮೀನನ್ನು ಮಾರಾಟಕ್ಕೆ ತೆಗೆದನು. ವಾದಿ ಹೆಚ್ಚಿನ ಮಾರುಕಟ್ಟೆ ಮೌಲ್ಯಕ್ಕೆ ಅಂದರೆ ರೂ ೧,೫೪,೦೦ ೦/೦೦ ಗಳಿಗೆ ಬೇಡಿಕೆ ಇಟ್ಟಿದ್ದನು. ಅದಕ್ಕೆ ಪ್ರತಿವಾದಿಯು ಒಪ್ಪಿಕೊಂಡು ೧ ಲಕ್ಷ ರೂಪಾಯಿ ಮುಂಗಡ ಹಣವನ್ನು ಪಡೆದುಕೊಂಡು, ವಾದಿಯ ಹೆಸರಿಗೆ ಕ್ರಯ ಕರಾರು ಪತ್ರವನ್ನು ಬರೆದುಕೊಟ್ಟು, ಸ್ವಾಧೀನ ಕೊಟ್ಟಿದ್ದಾಗಿ ವಾದಿಸಿದ್ದನು. ಪ್ರತಿವಾದಿ ತನ್ನ ವಕೀಲರ ಮುಖಾಂತರ ಹಾಜರಾಗಿ ಕೈಫಿಯತ್/ರಿಟರ್ನ್ ಸ್ಟೇಟ್ಮೆಂಟ್ ದಾಖಲಿಸಿದನು. ಪ್ರತಿವಾದಿಯು, ವಾದಿಗೆ ತಾನು ಕ್ರಯ ಕರಾರು ಪತ್ರವನ್ನು ಬರೆದುಕೊಟ್ಟಿಲ್ಲ, ಪತ್ರದ ಮೇಲಿರುವ ಹೆಬ್ಬೆಟ್ಟು ಸಹಿ ತನ್ನದಲ್ಲ, ವಾದಿಯಿಂದ ಮುಂಗಡ ಪಡೆದುಕೊಂಡಿಲ್ಲ, ಕರ್ನಾಟಕ ಭೂ ಸುಧಾರಣೆ ಕಾನೂನು, ಸ್ಟ್ಯಾಂಪ್ ಆಕ್ಟ್, ನೋಂದಣಿ ಕಾನೂನು, ಒಪ್ಪಂದ ಕಾನೂನು ಅಡಿಯಲ್ಲಿ ಕರಾರು ಪತ್ರ ಶೂನ್ಯವಾಗಿರುತ್ತದೆ ಎಂದು ಪ್ರತಿವಾದಿಸಿದನು.
ದಾವೆಯ ವಿಚಾರಣೆ ಹಂತದಲ್ಲಿ, ಪ್ರತಿವಾದಿ ಬೇರೆಯವನಿಗೆ ರೂ. ೬ ಲಕ್ಷಕ್ಕೆ ನೋಂದಾಯಿತ ಕ್ರಯಪತ್ರದಂತೆ ದಾವೆ ಸ್ವತ್ತು ಮಾರಾಟ ಮಾಡಿದ್ದನು. ವಾದಿಯು, ಕ್ರಯ ಪಡೆದವನನ್ನು ನ್ಯಾಯಾಲಯದ ಆದೇಶದಂತೆ ೨ನೆ ಪ್ರತಿವಾದಿ ಎಂದು ದಾವೆಯಲ್ಲಿ ಸೇರಿಸಿದನು.
೨ನೆ ಪ್ರತಿವಾದಿ ತಾನು ದಾವೆ ಜಮೀನಿನ ಬಗ್ಗೆ ಸಂಪೂರ್ಣ ವಿವರಣೆಯನ್ನು ಪಡೆದುಕೊಂಡು ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಕೊಟ್ಟು, ನೋಂದಾಯಿತ ಕ್ರಯ ಪತ್ರವನ್ನು ೧ನೆ ಪ್ರತಿವಾದಿಯಿಂದ ಬರೆಸಿಕೊಂಡು ದಾವೆ ಜಮೀನದ ಪ್ರತ್ಯಕ್ಷ ಸ್ವಾಧೀನದಲ್ಲಿ ಇದ್ದೇನೆ ಎಂದು ಪ್ರತಿವಾದಿಸಿದನು. ಈ ಹಂತದಲ್ಲಿ, ೧ನೆ ಪ್ರತಿವಾದಿ ಮೃತನಾದನು, ಮೃತನ ವಾರಸುದಾರ ಹೆಂಡತಿ, ಮಕ್ಕಳನ್ನು ಅವರ ವಕೀಲರು ಪ್ರತಿನಿಧಿಸಿದರು.
ವಾದಿಯ ಬೇಡಿಕೆಯಂತೆ ನ್ಯಾಯಾಲಯ, ಅವನ ಹೆಬ್ಬೆಟ್ಟು ಸಹಿಯನ್ನು ಕೈ ಬರಹ ತಜ್ಞರಿಗೆ ಕಳುಹಿಸಲಾಯಿತು. ಹೆಬ್ಬೆಟ್ಟು ಸಹಿ ಅಸ್ಪಷ್ಟವಾಗಿದ್ದು ಅದನ್ನು ೧ನೆ ಪ್ರತಿವಾದಿಯ ಮಾದರಿಯ ಸಹಿ ಜೊತೆ ಹೋಲಿಸಿ ಪರೀಕ್ಷಿಸಲಾಗದು ಎಂದು ವೈಜ್ಞಾನಿಕ ವರದಿ ಬಂದಿತು. ಕ್ರಯ ಕರಾರು ಪತ್ರದಲ್ಲಿ ೧ನೆ ಪ್ರತಿವಾದಿ ವಾದಿಗೆ ಸ್ವಾಧೀನ ಕೊಟ್ಟಿದ್ದಾನೆ ಎಂದು ನಮೂದಿಸಿರುವುದರಿಂದ ಅದು ಕರ್ನಾಟಕ ಸ್ಟ್ಯಾಂಪ್ ಆಕ್ಟ್ ಅಡಿಯಲ್ಲಿ ಸೂಚಿತವಾದ ಸ್ಟಾಂಪ್ ಮೇಲೆ ಬರೆದಿರುವುದಿಲ್ಲ ಎಂದು ವಾದಿಸಿದ್ದರಿಂದ, ನ್ಯಾಯಾಲಯವು, ವಾದಿಯು ಕಾನೂನಾತ್ಮಕವಾಗಿ ಕೊಡಬೇಕಾಗಿದ್ದ ಸ್ಟ್ಯಾಂಪ್ ಡ್ಯೂಟಿ, ಹತ್ತು ಪಟ್ಟು ದಂಡ ಸಹಿತ ರೂ ೨,೧೯,೧೦೯/ ಕೊಡುವ ಆದೇಶದಂತೆ (ಇಂಪಾಡ್) ಕರಾರು ಪತ್ರ ಸರಿಪಡಿಸಿಕೊಂಡನು. ಈ ಕರಾರು ಪತ್ರದ ಮೇಲಿನ ಸಹಿ ವೈಜ್ಞಾನಿಕವಾಗಿ ಸ್ಪಷ್ಟವಾಗಿಲ್ಲ, ದಂಡ ಸಹಿತ ಸ್ಟ್ಯಾಂಪ್ ಡ್ಯೂಟಿ ತುಂಬಿದರೂ ಕೂಡ, ವಾದಿ ಕರಾರು ಪತ್ರ ರುಜುವಾತುಪಡಿಸಬೇಕು ಎಂದು ಅಭಿಪ್ರಾಯಪಟ್ಟಿತು. ವಾದಿ ಪ್ರತಿವಾದಿ ಪರ ಸಾಕ್ಷಿದಾರರ ಹೇಳಿಕೆಯನ್ನು ನ್ಯಾಯಾಲಯ ಕೂಲಂಕುಶವಾಗಿ ವಿಶ್ಲೇಷಿಸಿತು.
ಪ್ರಶ್ನಿತ ಕ್ರಯ ಕರಾರು ಪತ್ರವು ನೋಂದಾಯಿತ ಆಗಿಲ್ಲ, ಆಗಿದ್ದರೆ ಜಮೀನಿನ ಋಣಭಾರ ದಾಖಲಾತಿಯಲ್ಲಿ ದಾಖಲಾಗುತ್ತಿತ್ತು. ಆದ್ದರಿಂದ ೨ನೇ ಪ್ರತಿವಾದಿಯು ಗಮನಕ್ಕೆ ಬಂದಿರುವುದಿಲ್ಲ. ೨೦೦೧ರಲ್ಲಿ ನೋಂದಣಿ ಕಾನೂನು ತಿದ್ದುಪಡಿ ಆಗಿದೆ. ಅದಕ್ಕಿಂತ ಮೊದಲು ಕರಾರು ಪತ್ರವಾಗಿದ್ದು ನೋಂದಣಿ ಅವಶ್ಯಕತೆಯಿಲ್ಲವಾದರೂ ವಾದಿ ಕರಾರು ಪತ್ರ ರುಜುವಾತುಪಡಿಸಲು ವಿಫಲನಾಗಿದ್ದಾನೆ ಎಂದು ಅಭಿಪ್ರಾಯಪಟ್ಟು, ದಾವೆಯನ್ನು ಭಾಗಶಃ ಪುರಸ್ಕರಿಸಿತು. ಕೋರ್ಟ್ ಹಾಲ್‌ನಿಂದ ಹೊರಗೆ ಬಂದೆ. ಕಕ್ಷಿದಾರರು ಸಾಲಾಗಿ ಕೈ ಮುಗಿದು ನಿಂತು ಕೃತಜ್ಞತೆ ಅರ್ಪಿಸಿದ ದೃಶ್ಯ ಎಂದೂ ಅಳಿಸದು.

Exit mobile version