Home ಅಪರಾಧ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅರ್ಜಿ ತಿರಸ್ಕಾರ

ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅರ್ಜಿ ತಿರಸ್ಕಾರ

0

ಬೆಂಗಳೂರು: ಬಹುಕೋಟಿ ಬಿಟ್‌ಕಾಯಿನ್ ಹಗರಣದಲ್ಲಿ ಬಂಧಿತರಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರಿಗೆ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಇದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಡಿವೈಎಸ್‌ಪಿ ಶ್ರೀಧರ್ ಕೆ.ಪೂಜಾರ್ ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಎಂ. ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಕೆ.ಎಸ್. ಸಂತೋಷ್‌ಕುಮಾರ್ ಅವರನ್ನು ಬಿಟ್‌ಕಾಯಿನ್ ಪ್ರಕರಣದಲ್ಲಿ ಜನವರಿ ೨೫ ರಂದು ಬಂಧಿಸಲಾಗಿತ್ತು. ಸಾಕ್ಷ್ಯನಾಶ ಆರೋಪದಡಿ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜ.೨೫ ರಿಂದ ಇಬ್ಬರೂ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು.
ಅಕ್ರಮ ಬಿಟ್‌ಕಾಯಿನ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಸಂತೋಷ್‌ಕುಮಾರ್ ಹಾಗೂ ಪ್ರಶಾಂತ್‌ಬಾಬು ಪರ ವಕೀಲರಾದ ಶ್ಯಾಮಸುಂದರ್ ಹಾಗೂ ಸುಧನ್ವ ಡಿ.ಎಸ್. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ೫೨ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಯಶವಂತ ಕುಮಾರ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇಬ್ಬರು ಆರೋಪಿಗಳು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಸೋಮವಾರ ಬಿಡುಗಡೆ ಯಾಗಲಿದ್ದಾರೆ ಎನ್ನಲಾಗಿದೆ.
ಆದರೆ ಬಿಟ್‌ಕಾಯಿನ್ ಹಗರಣದಲ್ಲಿ ತಮ್ಮನ್ನು ಬಂಧಿಸದಂತೆ ಈ ಹಿಂದೆ ಹೈಕೋರ್ಟ್ನಿಂದ ನಿರ್ಬಂಧಕಾಜ್ಞೆ ತಂದಿದ್ದ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಿಐಡಿ ಎಸ್‌ಐಟಿ ಆಕ್ಷೇಪಣೆ ಸಲ್ಲಿಸಿತ್ತು. ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿ ಶುಕ್ರವಾರ ಆದೇಶ ನೀಡಿದೆ.

Exit mobile version