Home ತಾಜಾ ಸುದ್ದಿ ಟ್ರಾಫಿಕ್ ಜಾಮ್‌ಗೆ ದಾದ್ ನಹೀ…. ಪುಕಾರ್ ನಹೀ….

ಟ್ರಾಫಿಕ್ ಜಾಮ್‌ಗೆ ದಾದ್ ನಹೀ…. ಪುಕಾರ್ ನಹೀ….

0

ಬಿ.ಅರವಿಂದ
ಹುಬ್ಬಳ್ಳಿ: ಹುಬ್ಬಳ್ಳಿಯ ಸಂಚಾರ ವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿರುವ ಬಗ್ಗೆ ಹೊಸದಾಗಿ ಯಾವ ಟಿಪ್ಪಣಿಯೂ ಇರಲಾರದು ನಿಜ. ಕಳೆದ ಒಂದು ತಿಂಗಳಿಂದ, ವಿಶೇಷವಾಗಿ ಸ್ಮಾರ್ಟ್ ಸಿಟಿ ಮತ್ತು ಫ್ಲೈ ಓವರ್ ಕಾಮಗಾರಿಗಳು ವೇಗ ಪಡೆದುಕೊಂಡಿರುವ ಈ ಸಂದರ್ಭದಲ್ಲಿ ಎದುರಾಗಿರುವ ಸಮಸ್ಯೆ ಈಗ ಪ್ರಜ್ಞಾವಂತ ಸವಾರರು ನಿಭಾಯಿಸಬೇಕಾಗಿ ಬಂದಿರುವ ನೂತನ ಸವಾಲು !
ಹುಬ್ಬಳ್ಳಿಯ ನಾಲ್ಕು ದಿಕ್ಕುಗಳ ಪೈಕಿ ಒಂದೇ ಒಂದರಲ್ಲೂ ಸಂಚಾರ ನಿರಾಳ' ಎಂದು ಸಮಾಧಾನ ಪಡುವ ಸ್ಥಿತಿ ಉಳಿದಿಲ್ಲ. ಗಬ್ಬೂರಿನಿಂದ ಒಳಪ್ರವೇಶಿಸಿ, ಇಲ್ಲವೇ ವಿಜಯಪುರ ಹೆದ್ದಾರಿಯ ಶ್ರೀನಿವಾಸ ಗಾರ್ಡನ್ ಕಡೆಯಿಂದ ಆಗಮಿಸಿ. ಇಲ್ಲಿನ ಸಂಚಾರ ಅವ್ಯವಸ್ಥೆಯನ್ನು ಅನುಭವಿಸಬೇಕಷ್ಟೇ ಅಲ್ಲ. ಹುಬ್ಬಳ್ಳಿಯ ಟ್ರಾಫಿಕ್ ಅವ್ಯವಸ್ಥೆ ಉಣಬಡಿಸುವ ಕಹಿಯನ್ನು ಸವಿಯಲೇಬೇಕು. ಅದರಲ್ಲೂ ಬಿಆರ್‌ಟಿಎಸ್ ಕಾರಿಡಾರ್ ಸಾಗುವ ಮಿಶ್ರಪಥ; ನಗರದ ಎಲ್ಲ ಕೇಂದ್ರ ಮತ್ತು ಹಳೆಯ ಭಾಗಗಳು; ಸಿಬಿಟಿ; ಗೋಕುಲ ರಸ್ತೆ; ಕಾರವಾರ ರಸ್ತೆ; ವಾಣಿವಿಲಾಸ ಸರ್ಕಲ್; ಪಿಂಟೋ ಸರ್ಕಲ್; ಹುಬ್ಬಳ್ಳಿಯ ಒಳಗಿನ ಎಲ್ಲ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ಮುಗಿಲು ಮುಟ್ಟಿದೆ. ನಿಯಮ ಪಾಲಕ ಸವಾರರ ಜೊತೆಗೆ ಪಾದಚಾರಿಗಳೂ ನಡೆದುಕೊಂಡು ಓಡಾಡಲಾಗದ ಸ್ಥಿತಿ ಕಳೆದ ಒಂದು ತಿಂಗಳಿಂದ ಎದ್ದು ಕಾಣುತ್ತಿದೆ. ಇದನ್ನು ಸಹ್ಯ ಮಾಡಲು ಪೊಲೀಸ್ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ ಎಂದಲ್ಲ. ಆದರೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಈ ಕೆಲಸ ನಿರ್ವಹಣೆಯಾಗಬೇಕಿತ್ತೋ ಅಷ್ಟು ಪ್ರಮಾಣದಲ್ಲಿ ಕಾಣುತ್ತಿಲ್ಲ ಎಂಬುದು ಸಾರ್ವತ್ರಿಕ ಆಕ್ರೋಶವಾಗಿದೆ. ಮೊದಲನೆಯದ್ದಾಗಿ ಕಿತ್ತೂರು ಚನ್ನಮ್ಮ ಸರ್ಕಲ್ ಸೇರಿದಂತೆ ಎಲ್ಲಿಯೂ ಸಿಗ್ನಲ್‌ಗಳಿಲ್ಲದ ಸ್ಥಿತಿ ಕೇಂದ್ರ ಭಾಗದ ಒಳಗೆ ನಿರ್ಮಾಣವಾಗಿವೆ. ಪಿಂಟೋ ಸರ್ಕಲ್ ಹೊರತುಪಡಿಸಿದರೆ ಉಳಿದೆಡೆ ಸಿಗ್ನಲ್‌ಗಳು ಕಾರ್ಯನಿರ್ವಹಿಸದೇ ಇರುವುದಕ್ಕೆ ಫ್ಲೈ ಓವರ್ ಕಾಮಗಾರಿ ಕಾರಣ ಎಂಬುದು ಬೇರೆ ವಿಷಯ. ಇನ್ನು ಗೋಕುಲ್ ರಸ್ತೆಯ ಅಕ್ಷಯ್ ಪಾರ್ಕ್ನಂತಹ ಮಹತ್ವದ ಜಂಕ್ಷನ್‌ನಲ್ಲಿ ಕೂಡ ಸಿಗ್ನಲ್ ಇಲ್ಲ. ಬಿಆರ್‌ಟಿಎಸ್ ಕಾರಿಡಾರ್‌ಗುಂಟ ಸಿಗ್ನಲ್‌ಗಳು ಚಲಾವಣೆಯ್ಲಿವೆ. ಆದರೆ ಜನತೆ ಕೇರ್ ಕೊಡುತ್ತಿಲ್ಲ.. ! ಹೀಗೆ ಎಲ್ಲಿಂದ ಎಲ್ಲಿಯೇ ಹೋದರೂ ಕನಿಷ್ಠ ಸಂಚಾರ ಶಿಸ್ತೂ ಇಲ್ಲದೇ, ಕೇವಲರಾಮ್ ಭರೋಸಾ’ (ದೇವರ ಮೇಲೆ ಭಾರ ಹಾಕುವುದು) ಆಧರಿಸಿ ಎರಡನೇ ಮಹಾನಗರ ಎಂದು ಒಣ ಹೆಮ್ಮೆ ಪಡುವ ನಗರದಲ್ಲಿ ವಾಹನಗಳು ಓಡಾಡುತ್ತಿವೆ.
ನಿಯಂತ್ರಣ ಮತ್ತು ಮೇಲ್ವಿಚಾರಣೆಯ ಕನಿಷ್ಠ ವ್ಯವಸ್ಥೆಯೂ ಇಲ್ಲದಂತಾಗಿರುವ ಹುಬ್ಬಳ್ಳಿಯಲ್ಲಿ ಬಹುತೇಕ ವಾಹನ ಸವಾರರು ಮನಬಂದಂತೆ ಓಡಿಸುತ್ತ, ಏಕಮುಖ ಸಂಚಾರವನ್ನು ಧಿಕ್ಕರಿಸುತ್ತ, ಅಪಾಯಕಾರಿಯಾಗಿ ರಾಂಗ್ ಸೈಡ್‌ನಲ್ಲಿ ಬರುತ್ತ ಅಪಾಯವನ್ನು ಹೆಚ್ಚಿಸಿದ್ದಾರೆ.
ಅಲ್ಲಲ್ಲಿ ಕಾರ್ಯನಿರ್ವಹಿಸುವ' ಸಂಚಾರ ಪೊಲೀಸ್ ಸಿಬ್ಬಂದಿ, ತಮ್ಮ ಕಣ್ಣೆದುರಿಗೇ ನಡೆಯುತ್ತಿರುವ ಈ ಟ್ರಾಫಿಕ್ ನಿಯಮಗಳ ಉಲ್ಲಂಘನೆಯನ್ನುಗಮನಿಸುತ್ತಿದ್ದಾರೆ’. !
ನಿಯಮ ಉಲ್ಲಂಘನೆ ಮಾಡುವವರನ್ನು ಬೇಕಿದ್ದರೆ ನಿರ್ಲಕ್ಷಿಸಲಿ, ನಿಯಮದ ಪ್ರಕಾರ ಓಡಿಸುವ ಸವಾರರಿಗೆ ಅಪಾಯ ಎದುರಾಗಿದೆ. ಈ ಕಾರಣಕ್ಕಾದರೂ ಪೊಲೀಸ್ ಇಲಾಖೆ ಇತ್ತ ಗಮನ ಹರಿಸಲಿ ಎಂಬ ಒತ್ತಾಯ ಕೇಳಿ ಬರುತ್ತಿದೆ.
ಹುಬ್ಬಳ್ಳಿಯಲ್ಲಿ ಸಂಚಾರ ಶಿಸ್ತು ಎಂದಿಗೂ ಇರಲೇ ಇಲ್ಲ. ಈಗ ಹೊಸದೇನಿದೆ ಎಂದು ಉಡಾಫೆ ಮನೋಭವಾನೆ ಸಲ್ಲ. ಏಕೆಂದರೆ ಈಗ ಕಾಮಗಾರಿಗಳಿಗೆ ವೇಗ ಬಂದಿರುವುದರಿಂದ ಪೊಲೀಸರು ಸಂಚಾರ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಕೆಲವು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಮೊದಲ ಆದ್ಯತೆಯಾಗಿ ಒನ್‌ವೇ, ರಾಂಗ್‌ಸೈಡ್ ನುಗ್ಗುವಿಕೆ ಸೇರಿದಂತೆ ಇತರ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಅರಿವು ಮೂಡಿಸುವ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ. ಇತ್ತೀಚೆಗಷ್ಟೇ ಭಾರೀ ಪ್ರಚಾರದೊಂದಿಗೆ ಮುಗಿದಿರುವ ಸಂಚಾರ ಸುರಕ್ಷತಾ ಸಪ್ತಾಹ ಹುಬ್ಬಳ್ಳಿಯಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಆದ್ದರಿಂದ ಔಪಚಾರಿಕ ಸಂಚಾರ ಸಪ್ತಾಹ ಕಾರ್ಯಕ್ರಮಗಳಿಗೆ ತಿಲಾಂಜಲಿ ಇತ್ತು, ಬಹುದೊಡ್ಡ ಪ್ರಮಾಣದಲ್ಲಿ ಅರಿವು ಅಭಿಯಾಮ ಕೈಗೆತ್ತಿಕೊಳ್ಳಬೇಕಿದೆ. ಇದಕ್ಕಾಗಿ ನಗರದ ಪ್ರಮುಖರನ್ನು, ಸಂಘ ಸಂಸ್ಥೆಗಳನ್ನು ಹಾಗೂ ಸಂಚಾರದ ಬಗ್ಗೆ ಕಾಳಜಿ ಹೊಂದಿರುವ ಪ್ರಜ್ಞಾವಂತರನ್ನು ಸೇರಿಸಿಕೊಂಡು ಸಮನ್ವಯ ಸಮಿತಿ ಮಾಡಿಕೊಳ್ಳುವ ಬಗ್ಗೆಯೂ ಆಲೋಚಿಸಬಹುದಾಗಿದೆ.

ಮುಖ್ಯವಾಗಿ ಆಗಬೇಕಾದುದು…
ಕಾಮಗಾರಿಯ `ಆಲಿಂಗನ’ದ ಒಳಸುಳಿಗೆ ಸಿಲುಕಿರುವ ಈ ನಗರದಲ್ಲಿ ಸಂಚಾರ ನಿಯಂತ್ರಣಕ್ಕೆ ಆಗಬೇಕಾಗಿರುವ ಮುಖ್ಯ ಕೆಲಸವೆಂದರೆ ರಾಂಗ್ ಸೈಡ್ ಓಡಿಸಿಕೊಂಡು ಬರುವ ಸವಾರರಿಗೆ ಬಿಸಿ ಮುಟ್ಟಿಸುವುದು. ಇದು ಪೊಲೀಸರಿಂದ ಖಂಡಿತ ಮಾಡಬಹುದಾದ ಕೆಲಸ.
ಬಿವಿಬಿ, ಕಾಡಸಿದ್ದೇಶ್ವರ ಕಾಲೇಜು, ಟೆಂಡರ್ ಶ್ಯೂರ್ ರಸ್ತೆ, ಹಳೇ ಕೋರ್ಟ್, ಕೊಪ್ಪೀಕರ್ ರಸ್ತೆಯ ಜಂಕ್ಷನ್, ಕಾರವಾರ ರಸ್ತೆ, ಉಣಕಲ್, ಸಾಯಿನಗರ, ಪಿಬಿ ರಸ್ತೆ, ಕುಸುಗಲ್ ರಸ್ತೆ, ಮಧುರಾ ಕಾಲೋನಿ, ಗೋಕುಲ ರಸ್ತೆ, ಗದಗ ರಸ್ತೆ ಹೀಗೆ ಎಲ್ಲೆಲ್ಲಿ ಡಬಲ್ ರೋಡ್ ಅಥವಾ ಏಕಮುಖ ವ್ಯವಸ್ಥೆ ಇದೆಯೋ ಅಲ್ಲೆಲ್ಲ ರಾಂಗ್ ಸೈಡ್‌ನಿಂದ ನುಗ್ಗುವರ ಸಂಖ್ಯೆ ಹೆಚ್ಚಾಗಿದೆ. ಯಾರಿಗೂ ಪೊಲೀಸ್ ಅಥವಾ ದಂಡದ ಭಯ ಇಲ್ಲದಂತಾಗಿದೆ. ಸಂಚಾರ ಎಸಿಪಿ ಮತ್ತು ಡಿಸಿಪಿ ಇಬ್ಬರೂ ಇತ್ತ ಗಮನಿಸಬೇಕಾಗಿದೆ.

ಲಿಂಕ್ ರೋಡ್‌ನಲ್ಲಿ ಸಂಕಷ್ಟ
ವಿದ್ಯಾನಗರದ ಟೆಂಡರ್ ಶ್ಯೂರ್ ರಸ್ತೆ ಈಗ ಹುಬ್ಬಳ್ಳಿಯ ಪಶ್ಚಿಮ ಮತ್ತು ಪೂರ್ವ ಭಾಗಗಳನ್ನು ಬೆಸೆಯುವ ಏಕೈಕ ಪ್ರಮುಖ ಲಿಂಕ್ ರಸ್ತೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಇದು ಹೈ ಡೆನ್ಸಿಸಿಟಿ ಟ್ರಾಫಿಕ್ (ಅತೀ ದಟ್ಟಣೆಯ ಸಂಚಾರ) ಸಮಸ್ಯೆ ಎದುರಿಸುತ್ತಿದೆ. ಸಾವಿರಾರು ವಾಹನಗಳು ಸಂಚರಿಸುವ ಇಲ್ಲಿನ ಶಿರೂರು ಪಾರ್ಕ್, ತತ್ವದರ್ಶ ಆಸ್ಪತ್ರೆ, ಚೇತನ ಕಾಲೇಜು, ಕೆನರಾ ಬ್ಯಾಂಕ್ ಅಥವಾ ತೋಳನಕೆರೆ ಸರ್ಕಲ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯಮಿತವಾಗಿ ಕಾಣುವುದಿಲ್ಲ. ಹೀಗಾಗಿ ಈ ಪ್ರಮುಖ ಸರ್ಕಲ್‌ಗಳಲ್ಲಿ ನಿತ್ಯ ಆಗುತ್ತಿರುವ ಟ್ರಾಫಿಕ್ ಜಾಮ್‌ಗೆ ದಾದ್ ನಹಿ, ಪುಕಾರ್ ನಹೀ ಎಂಬಂತಾಗಿದೆ.

ಸಿಬ್ಬಂದಿಗೆ ಸೂಚನೆ
ರಾಂಗ್‌ಸೈಡ್ ನುಗ್ಗುವಿಕೆ ಸೇರಿದಂತೆ ಎಲ್ಲ ಬಗೆಯ ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ಧ ಇನ್ನಷ್ಟು ಬಿಗಿ ಕ್ರಮ ತೆಗೆದುಕೊಳ್ಳುತ್ತೇವೆ. ತಕ್ಷಣದಿಂದ ಸಿಬ್ಬಂದಿಗೆ ಸೂಚನೆ ನೀಡಿ, ಸಂಚಾರ ನಿಯಮಗಳ ಉಲ್ಲಂಘಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗುತ್ತದೆ. ಸಾರ್ವಜನಿಕರೂ ನಿಯಮ ಪಾಲಿಸಿ ಸಹಕರಿಸಬೇಕು.

ರವೀಶ್ ಸಿ.ಆರ್., ಡಿಸಿಪಿ ಸಂಚಾರ ಮತ್ತು ಅಪರಾಧ

Exit mobile version