Home ತಾಜಾ ಸುದ್ದಿ ಜನಪರ ಹೋರಾಟಗಳಲ್ಲಿ ರಾಜಿ ಪ್ರಶ್ನೆಯೇ ಇಲ್ಲ

ಜನಪರ ಹೋರಾಟಗಳಲ್ಲಿ ರಾಜಿ ಪ್ರಶ್ನೆಯೇ ಇಲ್ಲ

0

ನಿರ್ದಿಷ್ಟ ಸಮುದಾಯದ ತುಷ್ಟೀಕರಣ, ಬಹು ಸಮುದಾಯಗಳ ತುಚ್ಚೀಕರಣ

ಬೆಂಗಳೂರು: ಜೆಡಿಎಸ್ – ಬಿಜೆಪಿ ಪಕ್ಷಗಳು ಈಗಾಗಲೇ ಒಟ್ಟಾಗಿ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿವೆ, ಮುಂದೆಯೂ ಹೋರಾಡುತ್ತವೆ. ಈ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹೋರಾಟದಲ್ಲಿ ಕರ್ನಾಟಕ ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಮುಸ್ಲಿಮರಿಗೆ ಕರ್ನಾಟಕ ಕಾಂಗ್ರೆಸ್‌ ಸರಕಾರ 4% ಗುತ್ತಿಗೆ ಮೀಸಲಾತಿ ನೀಡಿರುವುದರ ವಿರುದ್ಧದ ಹೋರಾಟದಲ್ಲಿ ಜನತಾದಳ ಮತ್ತು ಕರ್ನಾಟಕ ಬಿಜೆಪಿ ನಡುವೆ ಹೊಂದಾಣಿಕೆ ಇಲ್ಲ, ಗೊಂದಲವಿದೆ ಎನ್ನುವುದು ಸತ್ಯಕ್ಕೆ ದೂರ. ಕೆಲ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ವರದಿಯಾಗಿರುವ ವರದಿಗಳು ಸತ್ಯಕ್ಕೆ ದೂರ.

ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಮೊದಲೇ ಬೆಂಗಳೂರಿನಲ್ಲಿ #NDA ‘ಸಮನ್ವಯ ಸಮಿತಿ’ ಸಭೆ ನಡೆದು ಎಲ್ಲಾ ವಿಚಾರಗಳನ್ನೂ ಸಮಗ್ರವಾಗಿ ಚರ್ಚಿಸಲಾಗಿದೆ. ಸರಕಾರದ ವಿರುದ್ಧ ಹೋರಾಟದ ರೂಪುರೇಷೆ ರೂಪಿಸಲಾಗಿತ್ತು. ಆ ಸಭೆಯಲ್ಲಿ ಸ್ವತಃ ನಾನೂ ಭಾಗವಹಿಸಿದ್ದೆ.

ಕಾಂಗ್ರೆಸ್ ಸರಕಾರವು ಕೇವಲ ಚುನಾವಣಾ ಸ್ವಾರ್ಥಕ್ಕೆ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ‘ಸಾಮಾಜಿಕ ನ್ಯಾಯದ ಆದರ್ಶ ಪರಿಕಲ್ಪನೆ’ಯಾದ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಮೀಸಲಾತಿಯನ್ನೇ ಓಲೈಕೆ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ. ರಾಷ್ಟ್ರದ ಉದ್ದಗಲಕ್ಕೂ ಕಾಂಗ್ರೆಸ್‌ ಮೀಸಲು ಅರಾಜಕತೆ ಸೃಷ್ಟಿಸುತ್ತಿದೆ.

ಜೆಡಿಎಸ್ – ಬಿಜೆಪಿ ಪಕ್ಷಗಳು ಈಗಾಗಲೇ ಒಟ್ಟಾಗಿ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿವೆ, ಮುಂದೆಯೂ ಹೋರಾಡುತ್ತವೆ. ಈ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದುರ್ಬಲವಾಗಿರುವ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶಗಳು, ಸೌಲಭ್ಯಗಳು ಸಿಗಬೇಕು. ಆದರೆ, ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣ, ಬಹು ಸಮುದಾಯಗಳ ತುಚ್ಚೀಕರಣ ನ್ಯಾಯ ಸಮ್ಮತವಲ್ಲ. ಇದು ಸಂವಿಧಾನಕ್ಕೆ ಎಸಗುವ ಅಪಚಾರ.

ಮೀಸಲು ಧರ್ಮಾಧಾರಿತ ಅಲ್ಲ. ಅದು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ. ನಿಂತಿರಬೇಕು ಎನ್ನುವುದು ನಮ್ಮ ಅಚಲ ನಿಲುವು ಎಂದಿದ್ದಾರೆ.

Exit mobile version