Home ನಮ್ಮ ಜಿಲ್ಲೆ ಚಾಲಾಕಿ ಕಳ್ಳನ ಜೂಟಾಟ

ಚಾಲಾಕಿ ಕಳ್ಳನ ಜೂಟಾಟ

0

ಚಿತ್ರ: ನಟ್ವರ್‌ಲಾಲ್

ಗಣೇಶ್ ರಾಣೆಬೆನ್ನೂರು

ನಕಲಿ ದಾಖಲೆ ಸೃಷ್ಟಿ, ಫೋನ್ ಟ್ಯಾಂಪರಿಂಗ್, ಸಿಸ್ಟಮ್ ಹ್ಯಾಕ್… ಹೀಗೆ ನಾನಾ ರೀತಿಯ ಕ್ರೈಂ ಮೂಲಕ ಪೊಲೀಸರಿಗೆ ತಲೆ ಬಿಸಿಯಾಗಿರುತ್ತಾನೆ ನಟ್ವರ್‌ಲಾಲ್. ಸೈಬರ್ ಕ್ರೈಂನಲ್ಲಿ ನಿಸ್ಸೀಮನಾಗಿರುವ ಚಾಲಾಕಿ ನಟ್ವರ್‌ಲಾಲ್, ಅನೇಕ ರೀತಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿರುತ್ತಾನೆ. ಈಗಿನ ತಂತ್ರಜ್ಞಾನ ಬಳಸಿ ಹೇಗೆಲ್ಲ ಆಟವಾಡಬಹುದು ಎಂಬುದಕ್ಕೆ ಅನೇಕ ನಿದೇರ್ಶನಗಳು ಈ ಸಿನಿಮಾದಲ್ಲಿ ಅಡಕವಾಗಿವೆ. ಅಲ್ಲದೇ ೭೦ರ ದಶಕದಲ್ಲಿ ಪೊಲೀಸರ ನಿದ್ದೆಗೆಡಿಸಿದ್ದ ಇದೇ ಹೆಸರಿನ ಖತರ್ನಾಕ್ ಖದೀಮನ ಪುಸ್ತಕವೇ ಹೊಸ ನಟ್ವರ್‌ಲಾಲ್‌ಗೆ ಸ್ಫೂರ್ತಿಯಾಗಿರುತ್ತದೆ. ಇಷ್ಟೆಲ್ಲಾ ಜೂಟಾಟ ಆಡಿಸುತ್ತಿರುವ ನಟ್ವರ್ ಕೊನೆಗೆ ಪೊಲೀಸರ ಅತಿಥಿಯಾಗುತ್ತಾನಾ… ಆತ ಯಾಕಾಗಿ ಹೀಗೆ ಮಾಡುತ್ತಿದ್ದ..? ಅಷ್ಟಕ್ಕೂ ಆತನ ಗುರಿ ಏನು ಎಂಬುದಕ್ಕೆ ಸಿನಿಮಾದಲ್ಲಿ ಉತ್ತರವಿದೆ.
ಟೆಕ್ನಾಲಜಿ ಹಾಗೂ ಪೊಲೀಸ್ ಇಲಾಖೆಯ ಒಳ-ಹೊರಗನ್ನು ಸಾಕಷ್ಟು ಅಧ್ಯಯನ ಮಾಡಿ ಕಥೆ ಮಾಡಿದಂತಿದೆ ನಿರ್ದೇಶಕ ವಿ.ಲವ. ಹೀಗಾಗಿ ಸಾಕಷ್ಟು ಆಳವಾಗಿ ವಿಷಯವನ್ನು ಕಟ್ಟಿಕೊಟ್ಟಿದ್ದಾರೆ. ಥ್ರಿಲ್ಲಿಂಗ್ ಕಥಾನಕ, ಅದ್ಧೂರಿ ಮೇಕಿಂಗ್ ಮೂಲಕ `ನಟ್ವರ್‌ಲಾಲ್’ ಗಮನ ಸೆಳೆಯುತ್ತಾನೆ.
ನಟ್ವರ್‌ಲಾಲ್ ಪಾತ್ರವನ್ನು ತನುಷ್ ಶಿವಣ್ಣ ಜೀವಿಸಿದ್ದಾರೆ. ಅನೇಕ ಗೆಟಪ್‌ಗಳಲ್ಲಿ ಆಗಾಗ ಕತೆಗೆ ಟ್ವಿಸ್ಟ್ ಕೊಡುತ್ತಾರೆ. ಸೋನಾಲ್ ಮೊಂತೆರೋ, ನಾಗಭೂಷಣ್, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಮುಂತಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಧರ್ಮವಿಶ್ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕೆ ಪೂರಕವಾಗಿದೆ.

Exit mobile version