Home ಕೃಷಿ/ವಾಣಿಜ್ಯ ಗುವಾಹಟಿಯಲ್ಲಿ ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟನೆ

ಗುವಾಹಟಿಯಲ್ಲಿ ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟನೆ

0

ಜೀವಿತಾವಧಿ ಮುಗಿದ ವಾಹನಗಳ ಸುರಕ್ಷಿತ ವಿಲೇವಾರಿ: ವಾರ್ಷಿಕ 15,000 ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯ

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಇಂದು ಗುವಾಹಟಿಯಲ್ಲಿ ತನ್ನ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕ ‘ರೀ.ವೈ.ರ್. – ರೀಸೈಕಲ್ ವಿತ್ ರೆಸ್ಪೆಕ್ಟ್’ ಅನ್ನು ಉದ್ಘಾಟಿಸಿದೆ.

ಈ ಅತ್ಯಾಧುನಿಕ ಘಟಕವು ಸುಸ್ಥಿರ ಮತ್ತು ಪರಿಸರ ಪ್ರಜ್ಞೆಯ ಪ್ರಕ್ರಿಯೆಗಳ ಮೂಲಕ ವಾರ್ಷಿಕವಾಗಿ 15,000 ಜೀವಿತಾವಧಿ ಮುಗಿದ ವಾಹನಗಳನ್ನು ಸುರಕ್ಷಿತವಾಗಿ ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ರೀವೈರ್ ಘಟಕವನ್ನು ಟಾಟಾ ಮೋಟಾರ್ಸ್‌ ನ ಪಾಲುದಾರರಾದ ಆಕ್ಸಂ ಪ್ಲಾಟಿನಂ ಸ್ಕ್ರಾಪರ್ಸ್ ಸಂಸ್ಥೆ ನಿರ್ವಹಿಸುತ್ತದೆ ಮತ್ತು ಎಲ್ಲಾ ಬ್ರ್ಯಾಂಡ್‌ ಗಳ ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗುತ್ತದೆ. ಜೈಪುರ, ಭುವನೇಶ್ವರ್, ಸೂರತ್, ಚಂಡೀಗಢ, ದೆಹಲಿ ಎನ್ ಸಿ ಆರ್ ಪ್ರದೇಶ ಮತ್ತು ಪುಣೆಯಲ್ಲಿ ಈಗಾಗಲೇ ರೀವೈರ್ ಘಟಕಗಳಿದ್ದು, ಈ ಹೊಸ ಘಟಕವು ದೇಶದಲ್ಲಿ ಇರುವ ಏಳನೇ ಸ್ಕ್ರಾಪಿಂಗ್ ಘಟಕವಾಗಿದೆ.

ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿ, ಸಾರಿಗೆ, ಸಹಕಾರ, ಸ್ಥಳೀಯ ಮತ್ತು ಬುಡಕಟ್ಟು ನಂಬಿಕೆ ಮತ್ತು ಸಂಸ್ಕೃತಿ ಸಚಿವರಾದ ಜೋಗೆನ್ ಮೋಹನ್ ಮತ್ತು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ನೀರಾವರಿ ಸಚಿವರಾದ ಅಶೋಕ್ ಸಿಂಘಾಲ್ ಈ ಘಟಕವನ್ನು ಉದ್ಘಾಟಿಸಿದರು. ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಮತ್ತು ಆಕ್ಸಮ್ ಆಟೋಮೊಬೈಲ್ಸ್‌ನ ನಿರ್ದೇಶಕ ಡಾ. ಸಂಜೀವನಾರಾಯಣ್, ಅಸ್ಸಾಂ ಸರ್ಕಾರದ ಹಿರಿಯ ಅಧಿಕಾರಿಗಳು, ಟಾಟಾ ಮೋಟಾರ್ಸ್ ಮತ್ತು ಆಕ್ಸಮ್ ಆಟೋಮೊಬೈಲ್‌ನ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಾತನಾಡಿದ ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿ, ಸಾರಿಗೆ, ಸಹಕಾರ, ಸ್ಥಳೀಯ ಮತ್ತು ಬುಡಕಟ್ಟು ನಂಬಿಕೆ ಮತ್ತು ಸಂಸ್ಕೃತಿ ಸಚಿವರಾದ ಜೋಗೆನ್ ಮೋಹನ್ ಅವರು, “ಈ ಅತ್ಯಾಧುನಿಕ ವಾಹನ ಸ್ಕ್ರಾಪಿಂಗ್ ಘಟಕವು ಬಹಳಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ರಾಜ್ಯ ಹಾಗೂ ಜನ ಸಮುದಾಯಗಳು ಆರ್ಥಿಕ ಬೆಳವಣಿಗೆ ಹೊಂದಲು ನೆರವಾಗುತ್ತದೆ. ಜೊತೆಗೆ ಇದು ಜೀವಿತಾವಧಿ ಮುಗಿದ ವಾಹನಗಳ ಸುರಕ್ಷಿತ ವಿಲೇವಾರಿಯನ್ನು ಮಾಡಲಿದ್ದು, ಆ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡುತ್ತದೆ. ಅಸ್ಸಾಂನಲ್ಲಿ ಇಂಥಾ ಘಟಕ ಉದ್ಘಾಟಿಸಿದ್ದಕ್ಕೆ ನಾನು ಟಾಟಾ ಮೋಟಾರ್ಸ್‌ ಗೆ ಧನ್ಯವಾದ ಸಮರ್ಪಿಸುತ್ತೇನೆ” ಎಂದು ಹೇಳಿದರು.

ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ನೀರಾವರಿ ಸಚಿವ ಅಶೋಕ್ ಸಿಂಘಾಲ್ ಅವರು, “ಗುವಾಹಟಿಯಲ್ಲಿ ಟಾಟಾ ಮೋಟಾರ್ಸ್‌ ನ ರಿ.ವೈ.ರ್ ಘಟಕದ ಉದ್ಘಾಟನೆಯು ಸ್ವಚ್ಛ, ಹಸಿರು ಅಸ್ಸಾಂ ರೂಪಿಸುವ ಕಡೆಗಿನ ಮಹತ್ವದ ಹೆಜ್ಜೆಯಾಗಿದೆ. ಈ ಆಧುನಿಕ ಘಟಕವು ಸುಸ್ಥಿರ ವಾಹನ ವಿಲೇವಾರಿ ಸೌಲಭ್ಯ ಒದಗಿಸುತ್ತದೆ ಮತ್ತು ಅಸ್ಸಾಂನ ಪರಿಸರ ಹಾಗೂ ಜನರಿಗೆ ಪ್ರಯೋಜನ ಒದಗಿಸುತ್ತದೆ” ಎಂದು ಹೇಳಿದರು.

ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಅವರು, “ಇಂದು ಗುವಾಹಟಿಯಲ್ಲಿ ಈಶಾನ್ಯ ಭಾಗದ ಮೊದಲ ರೀ.ವೈ.ರ್. ಘಟಕವನ್ನು ಉದ್ಘಾಟಿಸುವ ಮೂಲಕ ಟಾಟಾ ಮೋಟಾರ್ಸ್ ಈ ಪ್ರದೇಶದಲ್ಲಿ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ನಾವು ಈಗ ವಾರ್ಷಿಕವಾಗಿ 100,000ಕ್ಕೂ ಹೆಚ್ಚು ಜೀವಿತಾವಧಿ ಮುಗಿದ ವಾಹನಗಳನ್ನು ಸ್ಕ್ರಾಪ್ ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಈ ಘಟಕ ನಿರ್ವಹಣೆಗೆ ಆಕ್ಸಮ್ ಪ್ಲಾಟಿನಂ ಸ್ಕ್ರಾಪರ್ಸ್ ಜೊತೆ ಪಾಲುದಾರಿಕೆ ಹೊಂದಲು ನಾವು ಹೆಮ್ಮೆಪಡುತ್ತೇವೆ ಮತ್ತು ಈ ಘಟಕ ಸ್ಥಾಪನೆಗೆ ನೆರವಾದ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇವೆ” ಎಂದು ಹೇಳಿದರು.

ಪ್ರತಿಯೊಂದು ರೀ.ವೈ.ರ್. ಘಟಕವು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದೆ ಮತ್ತು ಅದರ ಎಲ್ಲಾ ಕಾರ್ಯಾಚರಣೆಗಳು ಕಾಗದರಹಿತವಾಗಿರುತ್ತವೆ. ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳಿಗೆ ಸೆಲ್ -ಟೈಪ್ ಮತ್ತು ಲೈನ್- ಟೈಪ್ ಡಿಸ್ಮಾಂಟ್ಲಿಂಗ್‌ ವಿಭಾಗವನ್ನು ಹೊಂದಿರುವ ಈ ಘಟಕದಲ್ಲಿ ಟೈರ್‌ಗಳು, ಬ್ಯಾಟರಿಗಳು, ಇಂಧನ, ತೈಲಗಳು, ದ್ರವಗಳು ಮತ್ತು ಅನಿಲಗಳು ಸೇರಿದಂತೆ ವಿವಿಧ ಅಂಶಗಳನ್ನು ಸುರಕ್ಷಿತವಾಗಿ ಸ್ಕ್ರಾಪ್ ಮಾಡಲು ಅದಕ್ಕೆಂದೇ ಮೀಸಲಾದ ವಿಭಾಗಗಳಿವೆ. ಪ್ರತೀ ವಾಹನಕ್ಕೂ ನಿಖರವಾದ ದಾಖಲಾತಿ ಮತ್ತು ಸ್ಕ್ರಾಪಿಂಗ್ ಪ್ರಕ್ರಿಯೆ ನಡೆಸಲಾಗುತ್ತದೆ. ವಿಶೇಷವಾಗಿ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಜವಾಬ್ದಾರಿಯುತವಾಗಿ ಸ್ಕ್ರ್ಯಾಪಿಂಗ್ ಮಾಡಲು ಈ ಘಟಕವನ್ನು ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರದ ವಾಹನ ಸ್ಕ್ರ್ಯಾಪೇಜ್ ನೀತಿಯ ಪ್ರಕಾರ ಎಲ್ಲಾ ಘಟಕಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತದೆ. ರೀ.ವೈ.ರ್. ಪರಿಕಲ್ಪನೆ ಮತ್ತು ಘಟಕವು ಆಟೋಮೋಟಿವ್ ಉದ್ಯಮದಲ್ಲಿ ಸುಸ್ಥಿರ ಪದ್ಧತಿಗಳನ್ನು ಪಾಲಿಸುವ ಸಂಸ್ಥೆಯ ಬದ್ಧತೆಗೆ ಸಾಕ್ಷಿಯಾಗಿದೆ.