ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಮಧ್ಯಾಹ್ನದ ಬಳಿಕ ಭಾರೀ ಮಳೆಯಾಗಿದೆ.
ಒಂದು ಗಂಟೆಗೂ ಹೆಚ್ಚುಕಾಲ ನಿರಂತರವಾಗಿ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ತಾಲೂಕಿನ ಶಿರವಾಸೆ, ಮುತ್ತೋಡಿ, ಮಲಂದೂರು ಭಾಗದಲ್ಲಿ ಭಾರೀ ಮಳೆಯಾಗಿದೆ.
ಮಳೆಯ ಜತೆ ಗುಡುಗು, ಸಿಡಿಲು, ಬಾರಿಗಾಳಿಯೊಂದಿಗೆ ಮಳೆಯಾಗುತ್ತಿದ್ದು, ಶಿರವಾಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೂಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಮಳೆಯಿಂದ ಪರದಾಡುವಂತಾಗಿದೆ. ಕಳಸ ಭಾಗದಲ್ಲೂ ಮಳೆಯಾಗಿದ್ದು ನಿರಂತರ ಮಳೆಯಿಂದ ರೈತರು, ಕೃಷಿಕರು ಸಂತಸಗೊಂಡಿದ್ದಾರೆ. ಬಿಸಿಲ ಬೇಗೆಯಿಂದ ಕಾದ ಕಾವಲಿಯಂತಾಗಿದ್ದ ಧರೆಗೆ ವರುಣ ತಂಪೆರೆದಿದ್ದಾನೆ.