Home ತಾಜಾ ಸುದ್ದಿ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆ ಅಭಿವೃದ್ಧಿ ಯೋಜನೆಗೆ `7559 ಕೋಟಿ’

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆ ಅಭಿವೃದ್ಧಿ ಯೋಜನೆಗೆ `7559 ಕೋಟಿ’

0
ಹುಬ್ಬಳ್ಳಿಯ ರೈಲ್ ಸೌಧದಲ್ಲಿ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ್ ವಿವರ ನೀಡಿದರು.

ಹುಬ್ಬಳ್ಳಿ: ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕಕ್ಕಾಗಿ ೭೫೫೯ ಕೋಟಿ ರೂಗಳ ಕಾರ್ಯ ವೆಚ್ಚದ ಅಡಿಯಲ್ಲಿ ಕರ್ನಾಟಕಕ್ಕೆ ಅತ್ಯಧಿಕ ಬಜೆಟ್ ಹಂಚಿಕೆ ಮಾಡಲಾಗಿದೆ. ಇದು೨೦೦೯-೧೪ನೇ ಸಾಲಿನ ಸರಾಸರಿ ಬಜೆಟ್ ಅನುದಾನ ೮೩೫ ಕೋಟಿ ರೂಗಳಿಗೆ ಹೋಲಿಸಿದರೆ ೯ ಪಟ್ಟು ಹೆಚ್ಚಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಹೇಳಿದರು.
ಬುಧವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೆ ಲಭಿಸಿದ ಅನುದಾನ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಬಳಿಕ ನೈಋತ್ಯ ರೈಲ್ವೆ ವಲಯ ರೈಲ್ ಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕದ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ(ನೈಋತ್ಯ ರೈಲ್ವೆಯ) ೭೫೫೯ ಕೋಟಿ ಅನುದಾನ ಲಭಿಸಿದೆ. ಇದರಿಂದ ಅಭಿವೃದ್ಧಿ ಯೋಜನೆಗಳ ಜಾರಿಗೆ ವೇಗ ಸಿಗಲಿದೆ ಎಂದರು.
ಕರ್ನಾಟಕಕ್ಕಾಗಿ ಈ ಮೊದಲು ನೀಡಿದ ಯೋಜನೆ, ಮೊತ್ತ:
ಪ್ರಸ್ತುತ ಕರ್ನಾಟಕದಲ್ಲಿ ೪೭,೦೧೬ ಕೋಟಿ ರೂ.ಗಳ ಮೌಲ್ಯದ ೩೮೪೦ ಕಿ.ಮೀ ಉದ್ದದ ೩೧ ಯೋಜನೆಗಳು ಪ್ರಗತಿಯಲ್ಲಿವೆ. ಕಳೆದ ೧೦ ವರ್ಷಗಳಲ್ಲಿ ಕರ್ನಾಟಕದಾದ್ಯಂತ ೬೩೮ ರಸ್ತೆ ಮೇಲ್ಸೇತುವೆಗಳು ಮತ್ತು ರಸ್ತೆ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ, ಇದು ರಸ್ತೆ ಪ್ರಯಾಣಿಕರಿಗೆ ಸುರಕ್ಷಿತ ಮಾರ್ಗವನ್ನು ಖಾತ್ರಿಪಡಿಸಿದೆ.
೨೦೧೪ ರಿಂದ ೨೦೨೪ ರವರೆಗೆ, ಸರಾಸರಿ ವಾರ್ಷಿಕ ಹೊಸ ಮಾರ್ಗವು ಗಮನಾರ್ಹವಾಗಿ ೧೬೩ ಕಿಲೋಮೀಟರ್‌ಗೆ ಹೆಚ್ಚಾಗಿದ್ದು, ಇದು ೨೦೦೯ ರಿಂದ ೨೦೧೪ ರವರೆಗೆ ವರ್ಷಕ್ಕೆ ಸರಾಸರಿ ೧೧೩ ಕಿಲೋಮೀಟರ್‌ಗೆ ಹೋಲಿಸಿದರೆ ೧.೪ ಪಟ್ಟು ಹೆಚ್ಚಳವನ್ನು ಕಂಡಿದೆ.
ಕರ್ನಾಟಕದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಒಟ್ಟು ೫೯ ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಈ ರೈಲ್ವೆ ನಿಲ್ದಾಣಗಳು ನಿಲ್ದಾಣಗಳನ್ನು ವಿಶ್ವದರ್ಜೆಯ ಸೌಲಭ್ಯಗಳಾಗಿ ಪರಿವರ್ತಿಸುವುದು, ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವುದು ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಆಧುನೀಕರಿಸುವುದು ಮತ್ತು ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸುವ ದೃಷ್ಟಿಕೋನವನ್ನು ಈ ನಿಲ್ದಾಣಗಳು ಹೊಂದಿರಲಿವೆ.
೨೦೦೯-೨೦೧೪ ರ ಅವಧಿಯಲ್ಲಿ ವಿದ್ಯುದ್ದೀಕರಣವು ವರ್ಷಕ್ಕೆ ಸರಾಸರಿ ೧೮ ಕಿ.ಮೀ ಆಗಿದ್ದು ಮತ್ತು ೨೦೧೪-೨೦೨೪ ರ ಅವಧಿಯಲ್ಲಿ ಸರಾಸರಿ ವಿದ್ಯುದ್ದೀಕರಣವನ್ನು ವರ್ಷಕ್ಕೆ ೩೧೭ ಕಿ.ಮೀ.ಗೆ ಗಮನಾರ್ಹವಾಗಿ ಹೆಚ್ಚಿಸಲಾಗಿದೆ, ಇದು ಕಳೆದ ೧೦ ವರ್ಷಗಳಲ್ಲಿ ೧೮ ಪಟ್ಟು ಹೆಚ್ಚಾಗಿದೆ.
ನೈಋತ್ಯ ರೈಲ್ವೆಗಾಗಿ
ನೈಋತ್ಯ ರೈಲ್ವೆಯಲ್ಲಿ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ೧೧೦೩ ಕೋಟಿ ರೂ.ಗಳ ವೆಚ್ಚದಲ್ಲಿ ೪೬ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ ಮತ್ತು ೫ ಪ್ರಮುಖ ನಿಲ್ದಾಣಗಳನ್ನು ಸಹ ಪುನರಾಭಿವೃದ್ಧಿ ಮಾಡಲಾಗುತ್ತಿದೆ.
ಯಶವಂತಪುರ ನಿಲ್ದಾಣವನ್ನು ೩೬೭ ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಜುಲೈ ೨೦೨೫ ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ ಮತ್ತು ಬೆಂಗಳೂರು ಕಂಟೋನ್ಮೆಂಟ್. ನಿಲ್ದಾಣವನ್ನು ೪೮೪ ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಅಕ್ಟೋಬರ್ ೨೦೨೫ ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ಶೇ ೮೮% ಮಾರ್ಗವು ವಿದ್ಯುದ್ದೀಕರಣಗೊಂಡಿದ್ದು ಮಾರ್ಚ್ ೨೦೨೫ ರ ವೇಳೆಗೆ ೧೦೦% ವಿದ್ಯುದ್ದೀಕರಣದ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

Exit mobile version