Home ಸಂಪಾದಕೀಯ ಕೇಂದ್ರ-ದಕ್ಷಿಣ ರಾಜ್ಯಗಳ ಭಾಷೆ ಕಲಿಕೆ ಹಗ್ಗಜಗ್ಗಾಟ

ಕೇಂದ್ರ-ದಕ್ಷಿಣ ರಾಜ್ಯಗಳ ಭಾಷೆ ಕಲಿಕೆ ಹಗ್ಗಜಗ್ಗಾಟ

0

ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದ ಭಾಷೆ ಕಲಿಕೆ ಸಮಸ್ಯೆಯಾಗೇ ಉಳಿದಿದೆ. ತ್ರಿಭಾಷಾ ಸೂತ್ರವನ್ನು ದಕ್ಷಿಣ ಭಾರತದ ರಾಜ್ಯಗಳು ಒಪ್ಪಿಲ್ಲ. ಈಗಿನ ಭಾಗದ ಜನ ಹಿಂದಿ ಹೇರಿಕೆಯನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದಾರೆ. ಇಂಗ್ಲಿಷ್ ಪರಭಾಷೆಯಾದರೂ ಅದನ್ನು ಕಲಿಯಲು ಸಿದ್ಧ. ಹಿಂದಿ ಭಾಷೆ ಬಳಕೆಯಲ್ಲಿದ್ದರೂ ಅದರ ಹೇರಿಕೆಯನ್ನು ಜನ ಒಪ್ಪುವುದಿಲ್ಲ. ಹಿಂದಿ ಹೇರಿಕೆ ವಿರುದ್ಧ ಬೇಕಾದಷ್ಟು ಚಳವಳಿಗಳು ನಡೆದಿವೆ. ನಮ್ಮ ಜನ ಹಿಂದಿ ಮಾತನಾಡಲು ಹಿಂಜರಿಯುವುದಿಲ್ಲ. ಹಿಂದಿ ಮಾತನಾಡುವವರನ್ನೂ ವಿರೋಧಿಸುವುದಿಲ್ಲ. ಆದರೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿಸಲು ಸಿದ್ಧರಿಲ್ಲ. ಈಗ ದೇಶದಲ್ಲಿ ಹಿಂದಿ ಮಾತನಾಡುವ ರಾಜ್ಯಗಳು ಮತ್ತು ಹಿಂದಿಯೇತರ ರಾಜ್ಯಗಳು ಎಂದು ವಿಭಜಿಸಲಾಗುತ್ತಿದೆ. ತ್ರಿಭಾಷಾ ಸೂತ್ರದಲ್ಲಿ ಮೊದಲ ಭಾಷೆ ಹಿಂದಿ, ಎರಡನೇ ಭಾಷೆ ಇಂಗ್ಲಿಷ್, ಮೂರನೇ ಭಾಷೆ ಯಾವುದೇ ಭಾರತೀಯ ಭಾಷೆ ಎಂದಿದೆ. ಉತ್ತರ ಭಾರತದವರು ಹಿಂದಿ ಮತ್ತು ಇಂಗ್ಲಿಷ್ ಕಲಿಯುತ್ತಾರೆ. ಮೂರನೇ ಭಾಷೆಯಾಗಿ ಯಾವುದೇ ಭಾರತೀಯ ಭಾಷೆ ಕಲಿಯುತ್ತಿಲ್ಲ. ಅವರು ಕಲಿಯುವುದಿಲ್ಲ ಎಂದ ಮೇಲೆ ನಾವೇಕೆ ಹಿಂದಿ ಕಲಿಯಬೇಕು ಎಂಬುದು ದಕ್ಷಿಣ ಭಾರತದ ರಾಜ್ಯಗಳ ತಕರಾರು. ಇದರಲ್ಲಿ ಸತ್ಯಾಂಶವೂ ಇದೆ. ಉತ್ತರ ಭಾರತದವರು ದಕ್ಷಿಣದವರ ಮೇಲೆ ಹಿಂದಿ ಹೇರಲು ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ ಹಿಂದಿ ಭಾಷೆ ಹೇರಿಕೆಯನ್ನು ಒಪ್ಪಿಕೊಂಡರೆ ಮಾತೃಭಾಷೆಯ ಮಹತ್ವ ಕಡಿಮೆಯಾಗುತ್ತದೆ ಎಂಬ ಭಯವೂ ಇದೆ. ಹಿಂದಿಯನ್ನು ಒಪ್ಪಿಕೊಂಡರೆ ಆಡಳಿತ ಪೂರ್ತಿ ಹಿಂದಿಮಯವಾಗಿ ಹೋಗುತ್ತದೆ. ಇಂಗ್ಲಿಷ್‌ನಿಂದ ಸ್ಥಳೀಯ ಭಾಷೆಗಳು ಉಳಿದುಕೊಂಡಿದೆ. ಕೇಂದ್ರ ಸರ್ಕಾರ ಹಿಂದಿ ಒಂದರಲ್ಲೇ ವ್ಯವಹಾರ ನಡೆಸಲು ಸಿದ್ಧವಿದೆ. ಆಗ ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಹಿಂದಿ ಬಲ್ಲವರ ಮೇಲುಗೈ ಆಗುವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಹಿಂದಿ ಭಾಷೆ ಪ್ರಮುಖವಾಗುತ್ತಿದೆ. ಮಾತಿನ ವ್ಯವಹಾರದಲ್ಲಿ ಹಿಂದಿ ಬಳಕೆಯಲ್ಲಿದೆ. ಬರಹದಲ್ಲಿ ಹಿಂದಿ ಜನಪ್ರಿಯಗೊಂಡಿಲ್ಲ. ರಾಜಕಾರಣಿಗಳು ರಾಷ್ಟ್ರರಾಜಕಾರಣಕ್ಕೆ ಹೋಗಬೇಕು ಎಂದರೆ ಹಿಂದಿ ಕಲಿಯಲೇಬೇಕು. ದಕ್ಷಿಣ ಭಾರತದಲ್ಲಿ ಹಿಂದಿ ಬಲ್ಲವರಿಗೆ ಸಮಸ್ಯೆ ಇಲ್ಲ. ಆಂಧ್ರ, ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದವರಿಗೆ ಹಿಂದಿ ಭಾಷೆಯಲ್ಲಿ ವ್ಯವಹರಿಸುವುದು ಕಷ್ಟವಿಲ್ಲ. ದಕ್ಷಿಣ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ತೆಲುಗು ಮಾತನಾಡುವವರಿಗೆ ಕಷ್ಟ. ಅದರಲ್ಲೂ ತಮಿಳುನಾಡು ಮತ್ತು ಕೇರಳದವರು ಹಿಂದಿಯನ್ನು ತೀವ್ರವಾಗಿ ವಿರೋಧಿಸುತ್ತಾರೆ. ಹೊಸಶಿಕ್ಷಣ ನೀತಿ ಜಾರಿಗೆ ಬಂದರೂ ಹಿಂದಿ ಹೇರಿಕೆಯನ್ನು ದಕ್ಷಿಣದವರು ಸುತರಾಂ ಒಪ್ಪುವುದಿಲ್ಲ. ಈ ವಿಷಯದಲ್ಲಿ ಕೇಂದ್ರ ಯಾವುದೇ ಆಮಿಷ ಒಡ್ಡಿದರೂ ಅದು ಕೆಲಸಕ್ಕೆ ಬರುವುದಿಲ್ಲ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಚೆನ್ನೈನಲ್ಲೇ ಇದೆ. ಹಿಂದಿ ಭಾಷೆ ಕಲಿಯುತ್ತಾರೆ. ಆದರೆ ಅದನ್ನು ಆಡಳಿತ ಭಾಷೆಯಾಗಿ ಸ್ವೀಕರಿಸಲು ಸಿದ್ಧವಿಲ್ಲ.
ಈಗ ಕರ್ನಾಟಕದಲ್ಲಿ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಹಿಂದಿ ಕಲಿಕೆ ಇದೆ. ರಾಜ್ಯ ಪಠ್ಯಕ್ರಮದಲ್ಲಿ ಹಿಂದಿಗೆ ಬದಲಾಗಿ ಮಕ್ಕಳು ಸಂಸ್ಕೃತ ಓದುತ್ತಾರೆ. ಕನ್ನಡಕ್ಕೇ ಕೊಕ್ ಕೊಡಲಾಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲವನ್ನೂ ಕಲಿಯುವುದರಿಂದ ಕನ್ನಡದ ಮಕ್ಕಳಿಗೆ ಕನ್ನಡವೇ ಬರುವುದಿಲ್ಲ ಎಂಬ ಪರಿಸ್ಥಿತಿ ಬಂದಿದೆ. ಉತ್ತರ ಭಾರತದವರೊಂದಿಗೆ ವ್ಯವಹರಿಸುವುದಕ್ಕಾಗಿ ಹಿಂದಿ ಕಲಿಯುತ್ತಾರೆ. ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿರುವುದರಿಂದ ಅದು ಬೇಕೇ ಬೇಕು. ಹೀಗಾಗಿ ತ್ರಿಭಾಷಾ ಸೂತ್ರ ಕೇವಲ ಸರ್ಕಾರಿ ಕಡತದಲ್ಲಿ ಮಾತ್ರ ಉಳಿದುಕೊಂಡಿದೆ. ಉತ್ತರ ಭಾರತದವರು ಹಿಂದಿ-ಇಂಗ್ಲಿಷ್ ಕಲಿತರೆ ದಕ್ಷಿಣ ಭಾರತದವರು ಮಾತೃಭಾಷೆ ಮತ್ತು ಇಂಗ್ಲಿಷ್ ಕಲಿಯುತ್ತಿದ್ದಾರೆ. ಇದು ವಾಸ್ತವ ಸಂಗತಿ. ನಮ್ಮದು ಬಹುಭಾಷೆಗಳ ಸಂಗಮ. ಇಲ್ಲಿ ಯಾವುದೋ ಒಂದು ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸಲು ಬರುವುದಿಲ್ಲ. ೧೪ ಭಾಷೆಗಳು ಅಧಿಕೃತವಾಗಿರುವುದರಿಂದ ಎಲ್ಲ ಭಾರತೀಯ ಭಾಷೆಗಳನ್ನು ಯಾವುದೇ ಮಡಿವಂತಿಕೆ ಇಲ್ಲದೆ ಬಳಸುವುದು ಸೂಕ್ತ. ತ್ರಿಭಾಷೆ ಸೂತ್ರದ ಬಗ್ಗೆ ಉತ್ತರ ಭಾರತದವರು ಧ್ವನಿ ಎತ್ತುವುದು ಸರಿಯಲ್ಲ. ಅವರು ದಕ್ಷಿಣ ಭಾರತದ ಯಾವುದಾದರೂ ಭಾಷೆಯನ್ನು ಕಲಿತರೆ ಆಗ ಹಿಂದಿ ಕಲಿಯುವುದಕ್ಕೆ ಒತ್ತಾಯ ಮಾಡಬಹುದು. ಈಗ ಉತ್ತರದವರು ದಕ್ಷಿಣದ ಭಾಷೆಗಳ ಕಡೆಗೆ ತಿರುಗಿಯೂ ನೋಡುವುದಿಲ್ಲ ಎಂದಾಗ ಸಂಘರ್ಷ ನಡೆಯುವುದು-ನಡೆಸುವುದು ಅನಿವಾರ್ಯ. ಈ ವಿಷಯದಲ್ಲಿ ಸಾಮರಸ್ಯ ಮೂಡುವುದು ಕಷ್ಟ. ಅದರಲ್ಲೂ ತಮಿಳುನಾಡು ಮತ್ತು ಕೇರಳದ ಜನಸಾಮಾನ್ಯರಿಗೆ ತಮ್ಮ ಮಾತೃಭಾಷೆಗಳ ಬಗ್ಗೆ ತುಂಬ ಅಭಿಮಾನವಿದೆ. ಈ ವಿಷಯದಲ್ಲಿ ಅವರು ಯಾವುದೇ ರೀತಿಯ ರಾಜಿಸೂತ್ರಕ್ಕೆ ಒಪ್ಪುವುದಿಲ್ಲ. ಈಗ ಕೃತಕ ಬುದ್ಧಿಮತ್ತೆ ಬಂದಿರುವುದರಿಂದ ಯಾವುದೇ ಭಾಷೆಯಲ್ಲಿರುವ ವಿಷಯಗಳನ್ನು ಬೇರೆ ಭಾಷೆಗಳಿಗೆ ಸುಲಭವಾಗಿ ಅನುವಾದ ಮಾಡಬಹುದು. ಇದಕ್ಕಾಗಿ ಈಗ ಭಾಷೆಯನ್ನು ಕಲಿಯುವ ಅಗತ್ಯವಿಲ್ಲ. ಅಂತರಜಾಲದಲ್ಲಿ ಅನುವಾದ ಮಾಡಿಕೊಡುವ ಅವಕಾಶ ಇರುವಾಗ ಭಾಷೆ ಸಮಸ್ಯೆ ಬರುವುದೇ ಇಲ್ಲ. ಅಂತರ್‌ಜಾಲದಲ್ಲಿ ಎಲ್ಲ ಭಾಷೆಗಳೂ ಸಮಾನ. ನಮ್ಮ ಯುವ ಜನಾಂಗ ಅಗತ್ಯಕ್ಕೆ ತಕ್ಕಂತೆ ಭಾಷೆ ಕಲಿಯುವುದರಲ್ಲಿ ನಿಸ್ಸೀಮರು. ಅವರು ಯಾವುದೇ ಭಾಷೆಯ ಹೇರಿಕೆಯನ್ನು ಸಹಿಸುವುದಿಲ್ಲ.

Exit mobile version