ಬೆಂಗಳೂರು: ಕರ್ನಾಟಕ ಆಡಳಿತಾತ್ಮಕ ಸೇವೆಗಳ (ಕೆಎಎಸ್) ಆಯ್ಕೆಗೆ ಮತ್ತೊಂದು ಬಾರಿ ಪೂರ್ವಭಾವಿ ಪರೀಕ್ಷೆ ನಡೆಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ, ಸರ್ಕಾರ ಮತ್ತು ಕೆಪಿಎಸ್‌ಸಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅಲ್ಲದೇ, ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡುವಂತೆ ನಿರ್ದೇಶನ ಕೋರಿದ್ದ ಅರ್ಜಿದಾರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಕಾನೂನಿಗೆ ಅನುಗುಣವಾಗಿ ನಡೆಯುವ ಪ್ರಕ್ರಿಯೆಗೆ ಅಡ್ಡಿಪಡಿಸಿದಲ್ಲಿ ಅದಕ್ಕೆ ನ್ಯಾಯಾಲಯದ ಮುಂದೆ ಬರಬಹುದು ಎಂದು ತಿಳಿಸಿದ ಪೀಠ ವಿಚಾರಣೆಯನ್ನು ಜನವರಿ ೩೦ಕ್ಕೆ ಮುಂದೂಡಿತು.