ಜೇವರ್ಗಿ(ಕಲಬುರಗಿ): ತಾಲೂಕಿನ ರೇವನೂರ ಗ್ರಾಮದ ಹೊಲವೊಂದರಲ್ಲಿ ಕುರಿ ಮೇಯಿಸಲು ಹೋದ ವ್ಯಕ್ತಿಯ ಮೇಲೆ ಚಿರತೆಯೊಂದು ದಾಳಿ ಮಾಡಿದ ಘಟನೆ ಮಂಗಳವಾರ ನಡೆದಿದೆ. ನಿಂಗಪ್ಪ ಪೂಜಾರಿ(೪೫) ಎಂಬಾತ ಬೆಳಗ್ಗೆ ೮ ಗಂಟೆಗೆ ಹೊಲದಲ್ಲಿ ಕುರಿಗಳನ್ನು ಮೇಯಿಸುವಾಗ ಘಟನೆ ಸಂಭವಿಸಿದೆ. ಚಿರತೆಯು ಏಕಾಏಕಿ ಕುರಿಗಾಹಿಯ ಮೇಲೆ ದಾಳಿ ಮಾಡಿದ್ದು ಗಾಯಗಳಾಗಿವೆ. ಚಿರತೆ ದಾಳಿಯ ಸುದ್ದಿ ತಿಳಿಯುತ್ತಿದಂತೆ ಗ್ರಾಮಸ್ಥರು ಗಾಯಾಳುವನ್ನು ಜೇವರ್ಗಿ ಸರಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಗೆ ಜೇವರ್ಗಿ ಉಪ ವಲಯ ಅರಣ್ಯ ಅಧಿಕಾರಿ ಸಿದ್ದಣ್ಣಗೌಡ ಪಾಟೀಲ್ ಭೇಟಿ ನೀಡಿ, ಕುರಿಗಾಹಿ ರಕ್ತದ ಮಾದರಿ ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಹಾಗೂ ಚಿರತೆ ಸೆರೆ ಹಿಡಿಯಲು ವಿಶೇಷ ತಂಡ ರಚಿಸುವುದಾಗಿ ಭರವಸೆ ನೀಡಿದರು.