Home News ಕಾಶ್ಮೀರದಲ್ಲಿ ಚಿಕ್ಕಮಗಳೂರಿನವರು ಸುರಕ್ಷಿತ

ಕಾಶ್ಮೀರದಲ್ಲಿ ಚಿಕ್ಕಮಗಳೂರಿನವರು ಸುರಕ್ಷಿತ

ಚಿಕ್ಕಮಗಳೂರು: ಕಾಶ್ಮೀರ ಪ್ರವಾಸ ಕೈಗೊಂಡಿರುವ ಚಿಕ್ಕಮಗಳೂರು ನಗರದ ರಾಮೇಶ್ವರ ಬಡಾವಣೆಯ ಒಂದೇ ಕುಟುಂಬದ ಐವರು ಸುರಕ್ಷಿತವಾಗಿದ್ದಾರೆ.

ಚಂದ್ರಶೇಖರ್ ತನ್ನ ಕುಟುಂಬದವರೊಂದಿಗೆ ನಿನ್ನೆ ಕಾಶ್ಮೀರಕ್ಕೆ ತೆರಳಿದ್ದು ಪೆಹೆಲ್ಗಾಂನಲ್ಲಿ ಉಳಿದುಕೊಂಡಿದ್ದಾರೆ.

ಕುದುರೆ ಏರಿ ಘಟನೆ ನಡೆದ ಬೈಸರನ್ ವಾಲಿಯತ್ತ ತೆರಳುತ್ತಿದ್ದು 500 ಮೀಟರ್ ಅಂತರದಲ್ಲಿ ಇರುವಾಗ ಸಾಕಷ್ಟು ಜನ ಗಾಬರಿಗೊಂಡು ಹಿಂದಿರುಗುತ್ತಿರುವುದು ಕಂಡುಬಂದಿದೆ.

ತಕ್ಷಣ ಚಂದ್ರಶೇಖರ್ ಸ್ಥಳೀಯರಲ್ಲಿ ವಿಚಾರಿಸಿದಾಗ ಅವರು ಕಾಶ್ಮೀರಿ ಭಾಷೆಯಲ್ಲಿ ಉತ್ತರಿಸಿ ಮರ ಒಂದು ಬಿದ್ದಿದೆ, ಹೀಗಾಗಿ ನಾವು ಹಿಂದಿರುಗುತ್ತಿದ್ದೇವೆ ಗಾಬರಿ ಪಡಬೇಕಾದ ಅಗತ್ಯವಿಲ್ಲ ಎಂದು ಉತ್ತರಿಸಿದರು ಎನ್ನಲಾಗಿದೆ.

ಕೆಲವೇ ಕ್ಷಣಗಳಲ್ಲಿ ಭಯೋತ್ಪಾದರ ದಾಳಿ ನಡೆದಿರುವ ಸಂಗತಿ ಇವರಿಗೆ ತಿಳಿದು ಬಂದು ತಕ್ಷಣ ವಾಸ್ತವ್ಯ ಸ್ಥಳಕ್ಕೆ ಹಿಂದಿರುಗಿದ್ದಾರೆ. ಚಂದ್ರಶೇಖರ್ ಕುಟುಂಬ ಐದು ದಿನಗಳ ಪ್ರವಾಸ ಹಮ್ಮಿಕೊಂಡಿದ್ದು ತಾಯಿ ಇಂದಿರಮ್ಮ, ಪತ್ನಿ ಲೀಲಾ, ಮಕ್ಕಳಾದ ನಕ್ಷತ್, ಸ್ನೇಹ ಇವರೊಂದಿಗಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಆಪ್ತ ಸಹಾಯಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಕ್ಷಣ ಚಂದ್ರಶೇಖರ್ ಗೆ ಕರೆ ಮಾಡಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ರಾಜ್ಯದ ಪ್ರತಿನಿಧಿಯಾಗಿ ತೆರಳಿರುವ ಸಚಿವ ಸಂತೋಷ್ ಲಾಡ್ ಈಗಾಗಲೇ ಇವರನ್ನು ಸಂಪರ್ಕಿಸಿದ್ದು ಧೈರ್ಯ ತುಂಬಿದ್ದಾರೆ. ಚಂದ್ರಶೇಖರ್ ಕುಟುಂಬ ಸುರಕ್ಷಿತವಾಗಿ ಹಿಂದಿರುಗಲಿ ಎಂದು ರಾಮೇಶ್ವರನಗರ ಬಡಾವಣೆಯ ನಾಗರಿಕರು ಹಾರೈಸಿದ್ದಾರೆ.

Exit mobile version