ಪಣಜಿ: ಹಲವು ವರ್ಷದಿಂದ ಗೋವಾ ಸಾಖಳಿ ಸಮೀಪದ ಪರ್ಯೆ ಭೂಮಿಕಾ ದೇವಿಯ ಮಹಾಜನ ಗಾಂವ್ಕರ್, ರಾಣೆ ಮತ್ತು ಮಾಜಿಕ್ ಎಂಬ ಗುಂಪುಗಳ ನಡುವೆ ಧಾರ್ಮಿಕ ಹಕ್ಕುಗಳ ವಿವಾದವಿದ್ದು ದೇವಿಯ ಸಾಂಪ್ರದಾಯಿಕ ಕಲೋತ್ಸವ ಆಚರಣೆಯ ವೇಳೆ ಈ ವಿವಾದ ಭುಗಿಲೆದ್ದಿದೆ.
ಬುಧವಾರ ಆಚರಣೆ ವೇಳೆ ಇದ್ದಕ್ಕಿದ್ದಂತೆ ಕಲ್ಲು ತೂರಾಟ ಆರಂಭಗೊಂಡು ೨೫ ಕ್ಕೂ ಹೆಚ್ಚು ಜನರು ಮತ್ತು ೧೫ ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ೩೮ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ದೇವಸ್ಥಾನದ ಕಲೋತ್ಸವವನ್ನು ಜನವರಿ ೧೫ ಮತ್ತು ೧೬ ರಂದು ಆಯೋಜಿಸಲಾಗಿದ್ದು ಇದಕ್ಕೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮದ ಗುಂಪಿನ ಹಕ್ಕುಗಳನ್ನು ಪುನಃ ಸ್ಥಾಪಿಸುವವರೆಗೂ ಕಾಲೋತ್ಸವ ಆಚರಿಸಬಾರದು ಎಂದು ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ವಿಚಾರಣೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದು ಇದುವರೆಗೂ ತೀರ್ಪು ಪ್ರಕಟಿಸಿರಲಿಲ್ಲ.
ಬುಧವಾರ ಕಲೋತ್ಸವ ಆಚರಣೆ ಆರಂಭಗೊಂಡಾಗ ಗಾಂವ್ಕರ್ ಮತ್ತು ರಾಣೆ ಮಹಾಜನರ ಗುಂಪನ್ನು ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸದಂತೆ ಪೊಲೀಸರು ತಡೆದರು. ಆಗ ಭಕ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ಆರಂಭವಾಯಿತು. ಆಗ ಇದ್ದಕ್ಕಿದ್ದಂತೆಯೇ ಮತ್ತೊಂದು ಗುಂಪು ಕಲ್ಲು ತೂರಾಟ ಆರಂಭಿಸಿತು ಎಂಬ ಮಾಹಿತಿ ಲಭ್ಯವಾಗಿದೆ.