Home News ಕಲಾವಿದ ಕೋಡಿ ಕುಷ್ಠ ಗಾಣಿಗ ನಿಧನ

ಕಲಾವಿದ ಕೋಡಿ ಕುಷ್ಠ ಗಾಣಿಗ ನಿಧನ

ಉಡುಪಿ: ತೆಂಕು ಮತ್ತು ಬಡಗು ಉಭಯತಿಟ್ಟುಗಳ ಪ್ರಸಿದ್ಧ ಸ್ತ್ರೀ ವೇಷಧಾರಿ ಕೋಡಿ ಕುಷ್ಠ(ಕೃಷ್ಣ) ಗಾಣಿಗ(78) ಗುರುವಾರ ಕುಂದಾಪುರ ಕೋಡಿಯಲ್ಲಿನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಹೆರಂಜಾಲು ವೆಂಕಟರಮಣ ಗಾಣಿಗ ಅವರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆ, ಪಡ್ರೆ ಚಂದು ಅವರಿಂದ ತೆಂಕುತಿಟ್ಟಿನ ನಾಟ್ಯಾಭ್ಯಾಸ ಮಾಡಿ, ಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿ ಕಲಾಭಿಮಾನಿಗಳ ಅಭಿಮಾನಕ್ಕೆ ಪಾತ್ರರಾಗಿದ್ದರು.
ದೇವಿ, ನಂದಿನಿ, ಸುಭದ್ರೆ, ಮಂಡೋದರಿ, ದ್ರೌಪದಿ, ಕಯಾದು, ಸೀತೆ, ಅಂಬೆ, ದಮಯಂತಿ, ಮಾಯಾಪೂತನಿ, ಮಾಯಾಶೂರ್ಪನಖಿ, ಚಂದ್ರಮತಿ ಹೀಗೆ ಸ್ತ್ರೀಪಾತ್ರದ ನವರಸಗಳಲ್ಲಿಯೂ ನಿಸ್ಸೀಮರಾಗಿದ್ದರು. ಪುರುಷ ವೇಷಗಳಾದ ಪರಶುರಾಮ, ವಿಷ್ಣು, ಕೃಷ್ಣ ಪಾತ್ರಗಳನ್ನು ಮಾಡುತ್ತಿದ್ದರು. ಅವರು ಅಮೃತೇಶ್ವರಿ, ಮಾರಣಕಟ್ಟೆ, ಕಲಾವಿಹಾರ ಮೇಳ, ರಾಜರಾಜೇಶ್ವರಿ ಮೇಳ ಹಾಗೂ ಸುದೀರ್ಘವಾಗಿ ಕಟೀಲು ಮೇಳದಲ್ಲಿ ಒಟ್ಟು ಸುಮಾರು ಮೂರುವರೆ ದಶಕಗಳ ಕಾಲ ತಿರುಗಾಟ ಮಾಡಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೇ 31ರಂದು ಉಡುಪಿ ಯಕ್ಷಗಾನ ಕಲಾರಂಗ ವತಿಯಿಂದ 50 ಹಿರಿಯ ಸಾಧಕ ಕಲಾವಿದರಿಗೆ ನೀಡಲ್ಪಟ್ಟ ಐವತ್ತು ಸಾವಿರ ಮೊತ್ತವನ್ನೊಳಗೊಂಡ ಸುವರ್ಣ ಪುರಸ್ಕಾರಕ್ಕೆ ಕೋಡಿ ಕುಷ್ಠ ಗಾಣಿಗ ಭಾಜನರಾಗಿದ್ದರು.

ಕಲ್ಯಾಣ ಕರ್ನಾಟಕದಲ್ಲಿ ಸಂಯುಕ್ತ ಕರ್ನಾಟಕ ಬೆಳ್ಳಿ ಹಬ್ಬ
Exit mobile version