ಕುಷ್ಟಗಿ: ಪುರಸಭೆ ಕಂದಾಯ ವಿಭಾಗದ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಏ. 15ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೇಲಧಿಕಾರಿಗಳು ಕರೆದ ಸಭೆಗೆ ಗೈರು ಹಾಜರಿ ಮತ್ತು ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಪುರಸಭೆಯ ಕಂದಾಯ ಅಧಿಕಾರಿ ಎಂ.ಎನ್. ಖಾಜಾಹುಸೇನ್ ಮತ್ತು ಕಂದಾಯ ನಿರೀಕ್ಷಕ ರಾಘವೇಂದ್ರ ಬೇವಿನಾಳ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ ೭೩.೧೫ ಕೋಟಿ ತೆರಿಗೆ ವಸೂಲಿ ಬೇಡಿಕೆ ಇದ್ದು, ೧೨.೪೨ ಕೋಟಿ(ಶೇ. ೬೨)ರಷ್ಟು ವಸೂಲಿ ಮಾಡಲಾಗಿದೆ. ವಸೂಲಿ ಪ್ರಮಾಣದ ಪ್ರಗತಿ ಕಡಿಮೆಯಾಗಿದೆ. ಶೇ. ೧೦೦ರಷ್ಟು ಪ್ರಗತಿ ಸಾಧಿಸಲು ಸೂಚನೆ ಕಡೆಗಣಿಸಿದ್ದಾರೆ. ಆದರೆ, ತಮಗೆ ಕಳೆದ ಮಾರ್ಚ್ ೭ರಂದು ಕಂದಾಯ ಅಧಿಕಾರಿ ಹುದ್ದೆಗೆ ಚಾರ್ಜ್ ಆದೇಶ ಹೊರಡಿಸಿದ್ದು, ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದೇ ಕಂದಾಯ ಅಧಿಕಾರಿ ಏ. ೧೫ರಂದು ನಡೆದ ಸಭೆಯಲ್ಲಿ ಮರು ಉತ್ತರ ನೀಡಿದ್ದಾರೆ. ಅಲ್ಲದೆ ಪಟ್ಟಣದ ೧೬ ವಾಣಿಜ್ಯ ಮಳಿಗೆ ಬಾಡಿಗೆಗೆ ಹರಾಜು ಹಾಕುವ ವಿಚಾರದ ಚರ್ಚೆಯ ವೇಳೆ ಕಂದಾಯ ಅಧಿಕಾರಿ ಖಾಜಾಹುಸೇನ್ ಮತ್ತು ಕಂದಾಯ ನಿರೀಕ್ಷಕ ರಾಘವೇಂದ್ರ ಬೇವಿನಾಳ ಇಬ್ಬರೂ ಗೈರು ಹಾಜರಾಗಿದ್ದರು.
ಪೌರಾಡಳಿತ ನಿರ್ದೇಶನಾಲಯದ ಘಟನೋತ್ತರ ಮಂಜೂರಾತಿ ನಿರೀಕ್ಷಿಸಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ವಿವರಿಸಿದ್ದಾರೆ.