Home News ದುರಹಂಕಾರದಿಂದ ಯಾರೂ ದೊಡ್ಡವರಾಗುವುದಿಲ್ಲ: ಕಮಲ್ ಕನ್ನಡಿಗರ ಕ್ಷಮೆ ಕೇಳಲೇಬೇಕು

ದುರಹಂಕಾರದಿಂದ ಯಾರೂ ದೊಡ್ಡವರಾಗುವುದಿಲ್ಲ: ಕಮಲ್ ಕನ್ನಡಿಗರ ಕ್ಷಮೆ ಕೇಳಲೇಬೇಕು

ಬೆಂಗಳೂರು: ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಸಂವೇದನಾರಹಿತವಾಗಿ ಮಾತನಾಡಿರುವುದು ಅತ್ಯಂತ ಖೇದನೀಯ ಮತ್ತು ಖಂಡನಾರ್ಹ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಕನ್ನಡಿಗರ ಘೋಷ ವಾಕ್ಯ ಮಾತ್ರವಲ್ಲ, ಇದು ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಯ ಮೇಲಿರುವ ಕನ್ನಡಿಗರ ದೀಕ್ಷೆ. ಕನ್ನಡ ಯಾವುದೇ ನಿರ್ದಿಷ್ಟ ಭಾಷೆಯಿಂದ ಹುಟ್ಟಿಕೊಂಡಿಲ್ಲ ಎಂದು ಅನೇಕ ಹಿರಿಯ ಭಾಷಾ ಪರಿಣಿತರು ಸಿದ್ದ ಮಾಡಿ ತೋರಿಸಿದ್ದಾರೆ. ಇತಿಹಾಸ, ಭಾಷಾಶಾಸ್ತ್ರ ತಜ್ಞರಲ್ಲದ ಕಲಾವಿದ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಸಂವೇದನಾರಹಿತವಾಗಿ ಮಾತನಾಡಿರುವುದು ಅತ್ಯಂತ ಖೇದನೀಯ ಮತ್ತು ಖಂಡನಾರ್ಹ. ಅನಗತ್ಯವಾಗಿ ಶಾಂತಿ, ಸೌಹಾರ್ದತೆ, ಸಾಮರಸ್ಯಕ್ಕೆ ಭಂಗವುಂಟು ಮಾಡುವ ಅವರ ವರ್ತನೆ ಸರಿಯಲ್ಲ. ಅವರ ಅಭಿಪ್ರಾಯ ಮಂಡನೆಯ ಭರದಲ್ಲಿ ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದು, ಅವರು ಗೌರವಯುತವಾಗಿ ಕನ್ನಡ ಮತ್ತು ಕನ್ನಡಿಗರ ಕ್ಷಮೆ ಕೇಳಲೇಬೇಕು. ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ, ದುರಹಂಕಾರದಿಂದ ಯಾರೂ ದೊಡ್ಡವರಾಗುವುದಿಲ್ಲ! ಎಂದಿದ್ದಾರೆ.

Exit mobile version