Home ತಾಜಾ ಸುದ್ದಿ ಒಳಬೇಗುದಿಯಿಂದ ಸರ್ಕಾರ ಪತನ ಸಾಧ್ಯತೆ

ಒಳಬೇಗುದಿಯಿಂದ ಸರ್ಕಾರ ಪತನ ಸಾಧ್ಯತೆ

0

ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ಸಿಎಂ, ಡಿಸಿಎಂ ಸೃಷ್ಠಿ ಚರ್ಚೆ ವಿಚಾರ, ಸಿದ್ದರಾಮಯ್ಯ ಅವರು ಸಿಎಂ ಆದಾಗಿನಿಂದಲೂ ಈ ಬಗ್ಗೆ ಚರ್ಚೆಯಾಗುತ್ತಿದೆ. ಕಾಂಗ್ರೆಸ್‌ನ ಶಾಸಕರಲ್ಲೇ ಅವರ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಕಾಂಗ್ರೆಸ್ ಸರಕಾರದಲ್ಲಿ ಒಳಬೇಗುದಿ ಹೆಚ್ಚಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ರವಿವಾರ ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ನಡೆ ವಿರುದ್ಧ ಅವರ ಶಾಸಕರೇ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಶಾಸಕರ ಆ ಒಳಬೇಗುದಿಯಿಂದ ಯಾವುದೇ ಸಮಯದಲ್ಲಿ ಏನಾದರೂ ಆಗಬಹುದು. ಸರ್ಕಾರ ಪತನವೂ ಆಗಬಹುದು ಎಂದರು.
ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನ ಮುಚ್ಚಿಹಾಕಲು ಬಿಜೆಪಿ ಮೇಲೆ ಬೆರಳು ತೋರಿಸುತ್ತಿದೆ. ಸರ್ಕಾರದ ವ್ಯಾಪ್ತಿಯಲ್ಲೇ ಸಾಕಷ್ಟು ಹಗರಣಗಳಾಗಿವೆ. ಅವುಗಳನ್ನ ಮುಚ್ಚಿ ಹಾಕುವ ಸಂಚು ನಡೆಯುತ್ತಿವೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಕೇವಲ ನಾಗೇಂದ್ರ ಅವರ ತಲೆದಂಡ ಆಯ್ತು ಮತ್ತೇನೂ ಬೆಳವಣಿಗೆ ಆಗಿಲ್ಲ. ಸರ್ಕಾರ ಈ ಬಗ್ಗೆ ಗಂಭೀರತೆ ತೆಗೆದುಕೊಂಡಿಲ್ಲ. ಕೇವಲ ಸಿಎಂ, ಡಿಸಿಎಂ ವಿಚಾರದಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಅಧಿಕಾರಿಗಳಲ್ಲೂ ಗೊಂದಲಮಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.
ಜನರಲ್ಲಿ ಸರಕಾರ ಇದೆಯೋ ಇಲ್ಲೋ ಎಂಬ ಭಾವನೆ ಮೂಡಿದೆ. ಸರಕಾರ ಇದಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಇಲ್ಲವಾದರೆ ಸಂಘರ್ಷ ಹೆಚ್ಚಾಗುತ್ತದೆ. ಜನಪರ ಕಾಳಜಿ ಇಲ್ಲ. ಅಧಿಕಾರಿಗಳಿಗೆ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸ್ಥಗಿತವಾಗಿದೆ ಎಂದರು.

Exit mobile version