Home ತಾಜಾ ಸುದ್ದಿ ಎಚ್‌ಡಿಕೆಗೆ ತಲೆಬಿಸಿ ತಂದ ಸುಮಲತಾ ಹೇಳಿಕೆ

ಎಚ್‌ಡಿಕೆಗೆ ತಲೆಬಿಸಿ ತಂದ ಸುಮಲತಾ ಹೇಳಿಕೆ

0

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ದೆಹಲಿಯಲ್ಲಿ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ ೨೨ರವರೆಗೂ ಬಿಜೆಪಿ ಟಿಕೆಟ್ ಅಂತಿಮವಾಗಲ್ಲವೆಂದು ವಿಜಯೇಂದ್ರ ಸಹ ಹೇಳಿದ್ದಾರೆ. ನಾನು ರಾಜಕೀಯ ಮಾಡುವುದಾದರೆ ಮಂಡ್ಯದಿಂದಲೇ ಎಂದು ಹೇಳಿದ್ದೆ. ಈಗಲೂ ಅದೇ ಮಾತನ್ನೇ ಹೇಳುತ್ತಿದ್ದೇನೆ. ಪ್ರಧಾನಿ ಮೋದಿ ಸೂಚನೆ ಮೇರೆಗೆ ಜೆ.ಪಿ. ನಡ್ಡಾ ಅವರು ಕರೆಸಿದ್ದಾಗಿ ತಿಳಿಸಿದ್ದಾರೆ. ಪಕ್ಷದಲ್ಲಿ ನನ್ನ ಬಗ್ಗೆ ತುಂಬಾ ಗೌರವವಿದ್ದು, ಪಕ್ಷದಲ್ಲಿ ಇರಬೇಕು ಎಂದು ಹೇಳಿದ್ದಾರೆ.
ರಾಜಕೀಯ ಮಾಡುವುದಿದ್ದರೆ ಮಂಡ್ಯದಿಂದ ಮಾತ್ರ ಎಂದು ಹೇಳಿದ್ದೇನೆ. ಬೇರೆಯವರು ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಎಂದು ಹೇಳುತ್ತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರ ತಲೆಬಿಸಿ ಹೆಚ್ಚಿಸಿದ್ದಾರೆ.

Exit mobile version