Home ತಾಜಾ ಸುದ್ದಿ ಉ.ಕ ದವರು `ಸಿಎಂ’ ಆದರೆ ಸ್ವಾಗತಿಸುವೆ

ಉ.ಕ ದವರು `ಸಿಎಂ’ ಆದರೆ ಸ್ವಾಗತಿಸುವೆ

0

ಹುಬ್ಬಳ್ಳಿ: ರಾಜಕಾರಣದಲ್ಲಿ ಇರುವವರು ಯಾರು ಸನ್ಯಾಸಿಗಳಲ್ಲ. ಎಲ್ಲರಿಗೂ ಸಚಿವ ಸ್ಥಾನ ಪಡೆಯಬೇಕು ಎಂಬ ಆಸೆ ಇದ್ದೆ ಇರುತ್ತದೆ. ಸಿಎಂ ಬದಲಾವಣೆ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಉತ್ತರ ಕರ್ನಾಟಕದವರು ಸಿಎಂ ಆದರೆ ಸ್ವಾಗತಿಸುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲ ಹೇಳಿದರು.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಏನು ಚರ್ಚೆ ಆಗಿದೆ ಅನ್ನೋದು ಗೊತ್ತಿಲ್ಲ. ವರಿಷ್ಠರ ನಿರ್ಣಯದಂತೆ ನಡೆದು ಬಂದಿದೆ, ನಿರ್ಣಯ ಅವರಿಗೆ ಬಿಟ್ಟಿದ್ದು. ಅಧಿಕಾರ ಹಂಚಿಕೆ ಮಾತುಕತೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಸುರ್ಜೆವಾಲ್ ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದ ಶಿಸ್ತು ಉಲ್ಲಂಘನೆ ಆದ್ರೆ ಪಕ್ಷ ಶಿಥಿಲ ಆದಂತಾಗುತ್ತೆ. ಹೀಗಾಗಿ ಮಾಧ್ಯಮದ ಎದುರು ಹೋಗಬೇಡಿ ಅಂದಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಮ್ಮ ವಿಚಾರಗಳನ್ನು ಹೇಳಬಹುದಲ್ಲ. ಅದರ ಬದಲು ಮಾಧ್ಯಮಕ್ಕೆ ಹೋಗಿ ಹೇಳಿದ್ರೆ ಸಮಸ್ಯೆ ಬಗೆ ಹರಿಯೋದಿಲ್ಲ. ಆ ದೃಷ್ಟಿಯಿಂದ ರಣದೀಪ ಸುರ್ಜೆವಾಲಾ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದು ಹೇಳಿದರು.
ಅಧಿಕಾರ ಹಂಚಿಕೆ ವಿಚಾರವಾಗಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಕಾರ್ಯಕರ್ತರು ಶಾಸಕರಾಗಬೇಕು ಅಂತಾರೆ. ಶಾಸಕರು ಮಂತ್ರಿ ಆಗಬೇಕು, ಮಂತ್ರಿಗಳು ಸಿಎಂ ಆಗಬೇಕು ಅಂತಾರೆ. ಇದು ಸಾಮಾನ್ಯ. ಎಲ್ಲರೂ ಆಕಾಂಕ್ಷಿಗಳೇ ಎಂದು ಮಾರ್ಮಿಕವಾಗಿ ನುಡಿದರು.
ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಬೇಕು ಎನ್ನುವುದು ಎಲ್ಲಿ ಚರ್ಚೆ ಆಗಿದೆ? ಎಂಬುದು ಗೊತ್ತಿಲ್ಲ. ಜನರ ಕಣ್ಣೀರು ಒರೆಸಲು ರಾಜಕಾರಣಕ್ಕೆ ಬರಬೇಕು. ಈಗಿನ ರಾಜಕಾರಣ ಯಾವ ಮಟ್ಟಕ್ಕೆ ಬಂದಿದೆ ಎಂದು ಹೇಳಿದರೆ ನನ್ನ ಬಾಯಿ ಹೊಲಸು ಆಗುತ್ತದೆ ಎಂದರು.
ಸಿದ್ದರಾಮಯ್ಯ ಅವರ ತ್ಯಾಗದ ಮಾತಿಗೆ ಪ್ರತಿಕ್ರಿಯಿಸಿ, ಅವರಲ್ಲಿ ಅಂತಹ ಭಾವನೆ ಬಂದಿವೆ. ಅವರನ್ನೇ ಕೇಳಬೇಕು. ಬಿಜೆಟ್ ನಂತರ ಸಿಎಂ ಬದಲಾವಣೆ ನಮ್ಮ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಶೋಷಿತ ವರ್ಗದವರು ಮುಖ್ಯಮಂತ್ರಿ ಆಗಬೇಕು ಅನ್ನೋದು ಸಹಜ. ಉತ್ತರ ಕರ್ನಾಟಕದವರು ಸಿಎಂ ಆದರೆ ಸ್ವಾಗತ. ಉತ್ತರ ಕರ್ನಾಟಕದವರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಯಾವ ಪಕ್ಷದ ಸರ್ಕಾರ ಇದ್ದರೂ ಮಲತಾಯಿ ಧೋರಣೆಗೆ ಒಳಗಾಗಿದ್ದೇವೆ. ನಮ್ಮ ಎಲ್ಲಾ ಪ್ರಮುಖ ನೀರಾವರಿ ಯೋಜನೆ ಇದುವರೆಗೂ ಆಗ್ತಿಲ್ಲ ಎಂದರು.

Exit mobile version