ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಉಕ್ರೇನ್ ತಲುಪಿದ್ದು ತನ್ನ ಭೇಟಿ ಸಂದರ್ಭದಲ್ಲಿ ಮೋದಿ ಉಕ್ರೇನ್‌ಗೆ ವಿಪತ್ತು ನಿರ್ವಹಣೆ ಮತ್ತು ತುರ್ತು ವೈದ್ಯಕೀಯ ಪ್ರತಿಕ್ರಿಯೆಗಾಗಿ ರೂಪಿಸಲಾದ ಅತ್ಯಾಧುನಿಕ ಸಂಚಾರಿ ಆಸ್ಪತ್ರೆ ‘ಭೀಷ್ಮ ಕ್ಯೂಬ್’ನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ಪ್ರಾಜೆಕ್ಟ್ ಭೀಷ್ಮ್’ ಅಡಿ ಅಭಿವೃದ್ಧಿಗೊಳಿಸಲಾದ ಆಧುನಿಕ ಸಂಚಾರಿ ಆಸ್ಪತ್ರೆ ಘಟಕವಾಗಿದೆ. ಫೆ.2022ರಲ್ಲಿ ಪ್ರಕಟಿಸಲಾದ ಈ ಯೋಜನೆಯು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಕ್ಷಿಪ್ರ ವೈದ್ಯಕೀಯ ನೆರವು ಒದಗಿಸುವಲ್ಲಿ ಭಾರತದ ಬದ್ಧತೆ ಮತ್ತು ಜಾಗತಿಕ ಮಾನವೀಯ ಪ್ರಯತ್ನಗಳಲ್ಲಿ ಭಾರತದ ಹೆಚ್ಚುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ. ಭೀಷ್ಮ ಕ್ಯೂಬ್ ಆಧುನಿಕ ವೈದ್ಯಕೀಯ ಇಂಜಿನಿಯರಿಂಗ್‌ನ ಅದ್ಭುತವಾಗಿದ್ದು, ಕ್ಷಿಪ್ರ ಪ್ರತಿಕ್ರಿಯೆ ಮತ್ತು ಸಮಗ್ರ ಆರೈಕೆಯನ್ನು ಕೇಂದ್ರೀಕರಿಸಿ 200 ಗಾಯಾಳುಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅದನ್ನು ರೂಪಿಸಲಾಗಿದೆ. 720 ಕೆ.ಜಿ.ಗಳಷ್ಟು ತೂಗುವ ಘಟಕವು ಸುಲಭವಾಗಿ ಸಾಗಿಸಬಹುದಾದ 72 ಬಿಡಿಭಾಗಗಳನ್ನು ಹೊಂದಿದೆ. 1991ರಲ್ಲಿ ಉಕ್ರೇನ್ ಸೋವಿಯತ್ ಒಕ್ಕೂಟದಿಂದ ಸ್ವತಂತ್ರಗೊಂಡ ಬಳಿಕ ಇದು ಆ ದೇಶಕ್ಕೆ ಭಾರತೀಯ ಪ್ರಧಾನಿಯೋರ್ವರ ಪ್ರಥಮ ಭೇಟಿಯಾಗಿದೆ.
