Home ನಮ್ಮ ಜಿಲ್ಲೆ ಕೊಪ್ಪಳ ಉಕ್ಕು ಕಾರ್ಖಾನೆ ಸಿದ್ಧತಾ ಕಾರ್ಯ ಸ್ಥಗಿತ

ಉಕ್ಕು ಕಾರ್ಖಾನೆ ಸಿದ್ಧತಾ ಕಾರ್ಯ ಸ್ಥಗಿತ

0
oplus_18

ಕೊಪ್ಪಳ: ನಗರದ ಕೂಗಳತೆ ದೂರದಲ್ಲಿರುವ ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಉಕ್ಕು ಕಾರ್ಖಾನೆ ಸಿದ್ಧತಾ ಕಾರ್ಯ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಸ್ಥಗಿತಗೊಳಿಸಲಾಗಿದೆ.
ಜಿಲ್ಲೆಯ ಸರ್ವಪಕ್ಷಗಳ ನಾಯಕರ ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಬಿಎಸ್‌ಪಿಎಲ್ ಉಕ್ಕು ಕಾರ್ಖಾನೆ ಸ್ಥಾಪನೆ ಮಾಡಬೇಡಿ ಎಂದು ಮನವೊಲಿಸಿದ್ದರು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಿಲ್ಲಾಧಿಕಾರಿ ನಲಿನ್ ಅತುಲ್‌ಗೆ ಬಿಎಸ್‌ಪಿಎಲ್ ಸಿದ್ಧತಾ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕರೆದುಕೊಂಡು ಹೋಗಿ ಸ್ಥಗಿತಗೊಳಿಸಬೇಕು ಎಂದು ಸೂಚನೆ ನೀಡಿದ್ದರು. ಆದರೆ, ಬುಧವಾರ ಸಿದ್ಧತಾ ಕಾರ್ಯಗಳು ನಡೆದಿದ್ದವು. ಸಿಎಂ ಆದೇಶವನ್ನು ಜಿಲ್ಲಾಧಿಕಾರಿ ಪಾಲಿಸಿರಲಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಜಿಲ್ಲಾಧಿಕಾರಿ ನಲಿನ್ ಅತುಲ್ ಸಿಎಂ ಕಾರ್ಖಾನೆ ಸ್ಥಗಿತಕ್ಕೆ ಸೂಚಿಸಿದ್ದಾರೋ, ಇಲ್ಲವೋ ಎನ್ನುವ ಬಗ್ಗೆ ಬುಧವಾರ ಮಾಹಿತಿ ನೀಡಿರಲಿಲ್ಲ. ಈ ಕುರಿತು ಸುದ್ದಿಗಳು ಪ್ರಕಟವಾದ ಮೇಲೆ, ಎಚ್ಚೆತ್ತ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, `ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಬಿಎಸ್‌ಪಿಎಲ್ ಉಕ್ಕು ಕಾರ್ಖಾನೆಯ ಸಿದ್ಧತಾ ಕಾರ್ಯ ಸ್ಥಗಿತಗೊಳಿಸಲಾಗಿದೆ’ ಎಂದು ಪ್ರಕಟಣೆ ನೀಡಿದ್ದಾರೆ.
ಬಿಎಸ್‌ಪಿಎಲ್ ಉಕ್ಕು ಕಾರ್ಖಾನೆ, ಹಿಟಾಚಿ, ಟಿಪ್ಪರ್, ಜೆಸಿಬಿ ಬಳಕೆ ಮಾಡಿ, ನೆಲ ಸಮತಟ್ಟು ಮಾಡುವುದು, ತಗ್ಗು ಮುಚ್ಚುವ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಕಾರ್ಖಾನೆ ಮುಂದೆ ಹಾಕಿದ್ದ ಬ್ಯಾರಿಕೇಡ್ ತೆರವು
ಕಾರ್ಖಾನೆಯ ಮುಖ್ಯದ್ವಾರದ ಮುಂದೆ ಬಂಬು ಮತ್ತು ಬ್ಯಾರಿಕೇಡ್ ಅಳವಡಿಸಲಾಗಿತ್ತು. ತಾಲ್ಲೂಕಿನ ಬಸಾಪುರ ಕೆರೆಯನ್ನು ಸಾರ್ವಜನಿಕ ಮುಕ್ತಗೊಳಿಸಬೇಕು ಎಂದು ಹೈಕೋರ್ಟ್ ಆದೇಶವಿದೆ. ಆದರೆ, ಬಂಬು, ಬ್ಯಾರಿಕೇಡ್ ಹಾಕಿದರೆ ಜನರು ಮತ್ತು ಜಾನುವಾರುಗಳು ಕೆರೆಗೆ ಹೋಗಲು ತೊಂದರೆ ಆಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬಂಬು, ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದರು. ಅಲ್ಲದೇ ಎಂಎಸ್‌ಬಿಎಸ್ ಕಾರ್ಖಾನೆಯ ವಿರುದ್ಧ ಘೋಷಣೆ ಕೂಗಿದರು. ಬಿಎಸ್‌ಪಿಎಲ್ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Exit mobile version