Home ನಮ್ಮ ಜಿಲ್ಲೆ ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ

ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ

0

ಬೆಂಗಳೂರು: ಇದೊಂದು ‘’ಅಡ್ಡಕಸುಬಿ’’ ಬಜೆಟ್‌ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಬಜೆಟ್ ತಯಾರಿಕೆ ಎನ್ನುವುದು ಗಂಭೀರವಾದ ಪವಿತ್ರ ಸಾಂವಿಧಾನಿಕ ಕರ್ತವ್ಯ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ನೋಡಿದರೆ ಇದೊಂದು ‘’ಅಡ್ಡಕಸುಬಿ’’ ಬಜೆಟ್‌ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ.

ಸಾಧನೆಯ ಬಲದಿಂದಾಗಲಿ, ಅಭಿವೃದ್ಧಿ ಕೆಲಸಗಳಿಂದಾಗಲಿ ಲೋಕಸಭೆ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ತಿಳಿದಿರುವ ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡನೆಯ ಪವಿತ್ರ ಸಾಂವಿಧಾನಿಕ ಕರ್ತವ್ಯವನ್ನ ಚುನಾವಣಾ ಭಾಷಣದಂತೆ ದುರ್ಬಳಕೆ ಮಾಡಿಕೊಂಡು ಸಂವಿಧಾನಕ್ಕೆ ಮತ್ತು ಮತ ನೀಡಿ ಅಧಿಕಾರ ಕೊಟ್ಟ ಕನ್ನಡಿಗರಿಗೆ ಅಪಮಾನ ಎಸಗಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿ ಮಾಡಿದ ಅತಿದೊಡ್ಡ ಸಾಧನೆ ಎಂದರೆ ಒಂದು ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ₹44,000ಕ್ಕೂ ಅಧಿಕ ಸಾಲದ ಹೊರೆ ಹೇರಿದ್ದು. ಆ ಭಾಗ್ಯ ಈ ಭಾಗ್ಯ ಎಂದು ಎಂದು ರಾಜ್ಯದ ಜನತೆಯ ಮೇಲೆ ಸಾಲ ಭಾಗ್ಯ ಹೊರಿಸಿ ಹಳಿ ತಪ್ಪಿಸಿದ್ದ ರಾಜ್ಯದ ವಿತ್ತೀಯ ಶಿಸ್ತನ್ನ, ಕರ್ನಾಟಕ ಬಿಜೆಪಿ ಸರ್ಕಾರ ಕೋವಿಡ್ ಸಂಕಷ್ಟದ ಹೊರತಾಗಿಯೂ ಸರಿದಾರಿಗೆ ತಂದಿತ್ತು.

ಆದರೆ ಈಗ ತಮ್ಮ ಎರಡನೇ ಅವಧಿಯಲ್ಲೂ ಸಿಎಂ ಸಿದ್ದರಾಮಯ್ಯನವರು ಕರ್ನಾಟಕವನ್ನ ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಸಲು ಹೊರಟಿದ್ದಾರೆ. “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬುದು ಈ ಸರ್ಕಾರದಲ್ಲಿ “ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ” ಎಂಬಂತಾಗಿದೆ.

ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್. ಬಜೆಟ್ ಬಗೆಗಿನ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದು, ಇದು‌‌ ‘ಸಾಲರಾಮಯ್ಯನ ಸೋಗಲಾಡಿ’ ಬಜೆಟ್ ಆಗಿದೆ ಎಂದು ಬರೆದುಕೊಂಡಿದ್ದಾರೆ.

Exit mobile version