Home ಸಂಪಾದಕೀಯ ಆಹಾರಧಾನ್ಯ ಕೊರತೆ ತುಂಬುವುದು ಹೇಗೆ?

ಆಹಾರಧಾನ್ಯ ಕೊರತೆ ತುಂಬುವುದು ಹೇಗೆ?

0

ರಾಜ್ಯದಲ್ಲಿ ಬರಗಾಲ ಬಂದಿದೆ.ಆಹಾರ ಧಾನ್ಯ ಉತ್ಪಾದನೆ ಇಳಿಮುಖ ಖಚಿತ. ಈಗಲೇ ಹಣಕಾಸು ಇಲಾಖೆ ಪರ್ಯಾಯ ಬೆಳೆಗಳ ಉತ್ಪಾದನೆಗೆ ಹೆಚ್ಚಿನ ನೆರವು ನೀಡುವುದು ಅಗತ್ಯ.

ರಾಜ್ಯದಲ್ಲಿ ಕಾವೇರಿ ನೀರಿನ ಕೊರತೆಯಿಂದ ಬಂದ್‌ಗಳು ನಡೆಯುತ್ತಿವೆ. ಬರಗಾಲ ಕಾಲಿರಿಸಿದೆ. ೫೮ ಲಕ್ಷ ಟನ್ ಆಹಾರಧಾನ್ಯದ ಕೊರತೆ ಉಂಟಾಗಲಿದೆ ಎಂದು ಕೃಷಿ ಸಚಿವರು ಹೇಳಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿ ತಲೆಕೆಡಿಸಿಕೊಳ್ಳಬೇಕಿತ್ತು. ಗ್ಯಾರಂಟಿ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿ ತಿಂಗಳೂ ೧೦ ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ೫ ಕೆಜಿಯ ಕೇಂದ್ರದಿಂದ ಬರುತ್ತದೆ. ಉಳಿದ ೫ ಕೆಜಿಗೆ ಜನರಿಗೆ ಹಣ ಕೊಡಬೇಕು. ಆದರೂ ಅಕ್ಕಿ ಸಿಗುವುದು ಕಷ್ಟ. ಒಟ್ಟು ೧.೧೧ ಕೋಟಿ ಆಹಾರ ಧಾನ್ಯ ಉತ್ಪಾದನೆಯಾಗಬೇಕಿತ್ತು. ಈಗ ಅದು ಇಳಿಮುಖಗೊಂಡಿದೆ. ಆದರೆ ಪ್ರಕೃತಿ ಪೂರ್ಣ ಕೈಕೊಟ್ಟಿಲ್ಲ. ಉತ್ತರ ಕರ್ನಾಟಕದ ರೈತರೊಂದಿಗೆ ಸರ್ಕಾರ ಈಗಲೇ ಮಾತುಕತೆ ನಡೆಸಿದರೆ ಭತ್ತ ಹೆಚ್ಚು ಬೆಳೆದುಕೊಡಲು ಸಾಧ್ಯವಾಗುತ್ತದೆ. ಇದರಿಂದ ರೈತರಿಗೂ ಗ್ಯಾರಂಟಿ ಹಣ ಸಿಗುತ್ತದೆ. ಬೆಂಬಲ ಬೆಲೆ ಆಮೇಲೆ ಪ್ರಕಟಿಸುವುದಕ್ಕೆ ಬದಲಾಗಿ ಮೊದಲೇ ಕರಾರು ಮಾಡಿಕೊಂಡು ಭತ್ತಖರೀದಿಯನ್ನು ಸರ್ಕಾರವೇ ಕೈಗೊಳ್ಳಬಹುದು. ಇದರಿಂದ ರೈತರಿಗೆ ಮಾರುಕಟ್ಟೆ ಮತ್ತು ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಅಕ್ಕಿಯೊಂದಿಗೆ ಗೋಧಿ, ಜೋಳ, ರಾಗಿಯ ಬಗ್ಗೆ ಚಿಂತನೆ ನಡೆಸುವುದು ಅಗತ್ಯ. ನಮ್ಮಲ್ಲಿ ಮೊದಲಿನಿಂದಲೂ ಕೃಷಿ ರಂಗವನ್ನು ಕಡೆಗಣಿಸುತ್ತ ಬರಲಾಗಿದೆ. ರೈತರು ಎಂದರೆ ಸಾಲ ಕೊಡುವುದು ಮತ್ತು ಅದನ್ನು ಮನ್ನಾ ಮಾಡುವುದಷ್ಟೇ ಸರ್ಕಾರದ ಕೆಲಸ ಎನ್ನುವಂತಾಗಿದೆ. ಕೃಷಿಗೆ ಪ್ರತ್ಯೇಕ ಆರ್ಥಿಕ ವ್ಯವಸ್ಥೆ ಅಗತ್ಯ ಎಂಬುದನ್ನು ರಿಸರ್ವ್ ಬ್ಯಾಂಕ್ ಇನ್ನೂ ಮನವರಿಕೆ ಮಾಡಿಕೊಂಡಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಹಿಂದೆ ಸುಬ್ಬರಾವ್ ಆರ್‌ಬಿಐ ಗರ‍್ನರ್ ಆಗಿದ್ದಾಗ ಕೃಷಿ ಆರ್ಥಿಕತೆ ಬಗ್ಗೆ ಚಿಂತನೆ ಕಡಿಮೆ ನಡೆದಿದೆ ಎಂಬುದನ್ನು ಒಪ್ಪಿಕೊಂಡಿದ್ದರು. ಮುಂಬೈನಿಂದ ಪ್ರಕಟಗೊಳ್ಳುವ ವರದಿಯಲ್ಲಿ ಮಾತ್ರ ಕೃಷಿ ರಂಗದ ಅಂಕಿಅಂಶಗಳು ಸ್ಪಷ್ಟವಾಗಿರುತ್ತದೆ. ಉಳಿದ ಎಲ್ಲ ಅಂಕಿಅಂಶಗಳು ಆಯಾ ಕಾಲಕ್ಕೆ ಸಿದ್ಧಪಡಿಸಿದ್ದು, ನಿಕರವಾಗಿಲ್ಲ. ಇದನ್ನು ಕೇಂದ್ರ ಹಣಕಾಸು ಸಚಿವರೇ ಒಪ್ಪಿಕೊಂಡಿದ್ದಾರೆ. ನಾವು ಕೈಗಾರಿಕೆ ಆರ್ಥಿಕ ರಂಗದ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಕೃಷಿಗೆ ಗಮನಹರಿಸಿಲ್ಲ. ನಮ್ಮ ಎಲ್ಲ ಜನಪ್ರತಿನಿಧಿಗಳು ಮಣ್ಣಿನ ಮಕ್ಕಳೇ ಆಗಿದ್ದರೂ ವೈಜ್ಞಾನಿಕ ಅಧ್ಯಯನಕ್ಕೆ ಗಮನ ಹರಿಸಿಲ್ಲ. ಡಾ.ಸ್ವಾಮಿನಾಥನ್ ವರದಿ ಹೊರತುಪಡಿಸಿದರೆ ಬೇರೆ ಯಾವ ವರದಿಯೂ ಆಧಾರವಾಗಿ ಪರಿಗಣಿಸಲು ಸಾಧ್ಯವಾಗಿಲ್ಲ. ರೈತರು ಸುಗ್ಗಿಯನ್ನು ಬಯಸಬಾರದು ಎಂಬಂತೆ ನಮ್ಮ ಸರ್ಕಾರದ ನೀತಿ ಇದೆ. ಟೊಮೇಟೊ ಅಭಾವ ಬಂದಿತು. ಆಗ ಬೆಳೆದ ರೈತರಿಗೆ ಲಕ್ಷಾಂತರ ರೂ. ಬಂದಿತು. ಈಗ ಟೊಮೇಟೊ ಬೆಲೆ ಕುಸಿದಿದೆ. ರೈತನನ್ನು ಕೇಳುವವರು ಇಲ್ಲ. ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ಅಧಿಕಗೊಂಡಿತು. ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ನಿರ್ಬಂಧ ವಿಧಿಸಿತು. ಇದರಿಂದ ರೈತರಿಗೆ ನಷ್ಟವಾಯಿತು. ಈ ಪರಿಸ್ಥಿತಿ ಕೈಗಾರಿಕೆಗಳಿಗೆ ಬರುವುದಿಲ್ಲ. ಕೊರೊನಾ ಬಂದಾಗ ಹೆಚ್ಚು ಪರಿಹಾರ ಪಡೆದವರು ಉದ್ಯಮಿಗಳು. ರೈತರಲ್ಲ. ಹಾಗೆ ನೋಡಿದರೆ ನಗರಪ್ರದೇಶದ ಜನ ವಲಸೆ ಹೋದಾಗ ನೆರವಿಗೆ ಬಂದಿದ್ದು ಹೈನುಗಾರಿಕೆ. ಕೈಗಾರಿಕೆ ಅಲ್ಲ.
ಈಗ ರಾಜ್ಯದಲ್ಲಿ ಬರಗಾಲ ಕಾಲಿರಿಸಿದೆ. ನಮ್ಮ ಹಣಕಾಸು ಇಲಾಖೆ ಮತ್ತು ಆರ್ಥಿಕ ತಜ್ಞರು ಈಗಲೇ ಪರ್ಯಾಯ ವ್ಯವಸ್ಥೆ ಮಾಡಿ ರೈತರ ಸಹಕಾರ ಪಡೆದು ಆಹಾರ ಕೊರತೆ ತಲೆಎತ್ತದಂತೆ ನೋಡಿಕೊಳ್ಳಬೇಕು. ಪರಿಸ್ಥಿತಿಯ ದುರುಪಯೋಗ ಪಡಿಸಿಕೊಳ್ಳುವುದೇ ರಾಜಕಾರಣಿಯಗಳ ಪ್ರವೃತ್ತಿಯಾಗಬಾರದು. ಇಸ್ರೋ ನಮ್ಮಲ್ಲೇ ಇದೆ. ಉಪಗ್ರಹಗಳ ಮೂಲಕ ಹವಾಮಾನ ಮತ್ತು ಬೆಳೆಗಳ ಪರಿಸ್ಥಿತಿಯ ಬಗ್ಗೆ ವೈಜ್ಞಾನಿಕ ಅಂಕಿಅಂಶಗಳನ್ನು ಪಡೆದು ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಈ ವಿಷಯದಲ್ಲಿ ವೈಯಕ್ತಿಕ ಆಸಕ್ತಿವಹಿಸುವುದು ಅಗತ್ಯ. ಅವರ ಕೈಯಲ್ಲೇ ಹಣಕಾಸು ಇಲಾಖೆ ಇದೆ. ಕೇವಲ ಜಿಎಸ್‌ಟಿ ಸಂಗ್ರಹದಿಂದ ಎಲ್ಲವೂ ಆಗುವುದಿಲ್ಲ.

https://samyuktakarnataka.in/%e0%b2%ac%e0%b3%8d%e0%b2%af%e0%b2%be%e0%b2%b0%e0%b2%b2%e0%b3%8d-%e0%b2%b8%e0%b3%87%e0%b2%a4%e0%b3%81%e0%b2%b5%e0%b3%86-%e0%b2%a8%e0%b2%bf%e0%b2%b0%e0%b3%8d%e0%b2%ae%e0%b2%bf%e0%b2%b8%e0%b2%bf/

Exit mobile version