ಬೆಂಗಳೂರು: ಐತಿಹಾಸಿಕ ಕಾರಣಗಳಿಂದಾಗಿ ಅತ್ಯಂತ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಆರ್ಟಿಕಲ್ 371ಜೆ ಎಂಬ ವಿಶೇಷ ಸ್ಥಾನಮಾನವು ಪೂರ್ಣ ಬಳಕೆಯಾದಾಗ ಮಾತ್ರ ಅರ್ಥಪೂರ್ಣವಾಗುತ್ತದೆ ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಿನ್ನೆ ಅಧಿಕಾರಿಗಳ ಸಭೆ ನಡೆಸಿ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ 371 ಜೆ ಅಡಿ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಹುದ್ದೆಗಳ ನೇಮಕಾತಿಗಳು ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳಂತೆ ನಡೆಯುತ್ತಿಲ್ಲ, 2023ರ ಸರ್ಕಾರದ ಆದೇಶದಂತೆ ಕಟ್ಟುನಿಟ್ಟಾಗಿ ಎಲ್ಲ ಆಯ್ಕೆಗಳನ್ನು ಮಾಡಬೇಕು ಎಂದು ಸೂಚಿಸಿದ್ದಾರೆ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದಾಗ್ಯೂ ವಿವಿಧ ಇಲಾಖೆಗಳಲ್ಲಿ ಗೊಂದಲ ಇರುವುದರಿಂದ ಮತ್ತೊಮ್ಮೆ ಸೂಕ್ತ ಮಾರ್ಗದರ್ಶನಗಳನ್ನು ನೀಡುವಂತೆ ಸೂಚಿಸಲಾಗಿದೆ. 371-ಜೆ ಅನುಷ್ಠಾನದ ಕುರಿತಾಗಿ ಸಚಿವ ಸಂಪುಟದ ಉಪ ಸಮಿತಿಯ ಸಭೆ ಕರೆದು ಈ ಸಂಬಂಧದ ಗೊಂದಲಗಳನ್ನು ನಿವಾರಿಸಲಾಗುವುದು. ನೇಮಕಾತಿ ವಿಚಾರದಲ್ಲಿ ಯಾವುದೇ ರಾಜಿಯಾಗದಂತೆ ಹಾಗೂ ಆರ್ಟಿಕಲ್ 371ಜೆ ನಿಯಮಗಳಿಗೆ ಅಪಚಾರವಾಗದಂತೆ ಮತ್ತು ಹಿಂದುಳಿದ ಪ್ರದೇಶದ ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಹೊಣೆಯಾಗಿದೆ ಎಂದಿದ್ದಾರೆ.