ಹುಬ್ಬಳ್ಳಿ: ಆಧುನಿಕ ಜಗತ್ತಿನಲ್ಲಿ ನೇತ್ರ ತಜ್ಞರಿಗೆ ಹೊಸ ರೀತಿಯ ಸವಾಲುಗಳು ಎದುರಾಗುತ್ತಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಿ ದೇಶದ ಜನರ ನೇತ್ರ ಸಂರಕ್ಷಣೆಗೆ ಈ ತಜ್ಞರ ಸಮ್ಮೇಳನ ಆಯೋಜನೆ ಮಾಡಿರುವುದು ಅರ್ಥಪೂರ್ಣವಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿನ ಡಾ. ಎಂ.ಎಂ ಜೋಶಿ ಕಣ್ಣಿನ ಆಸ್ಪತ್ರೆ ಹಾಗೂ ನೇತ್ರ ವಿಜ್ಞಾನ ಸಂಸ್ಥೆಯು ರವಿವಾರ ಆಯೋಜಿಸಿದ್ದ `ಐ ಫೆಸ್ಟ್’ ನೇತ್ರ ತಜ್ಞರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪದ್ಮಶ್ರೀ ಡಾ.ಎಂ.ಎಂ. ಜೋಶಿ ಅವರು ಅರ್ಧ ಶತಮಾನಕ್ಕಿಂತ ಮೊದಲೇ, ಏನೂ ಸೌಕರ್ಯಗಳಿಲ್ಲದ ಕಾಲದಲ್ಲಿ ಗ್ರಾಮೀಣ, ಬಡವರ, ನಗರ ಪಟ್ಟಣ ವಾಸಿಗಳ ನೇತ್ರ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ನೆರವೇರಿಸಿ ಮಾಡಿದ ಸಾಧನೆ ಅನನ್ಯ ಮತ್ತು ಬೆಲೆ ಕಟ್ಟಲಾಗದು. ಕಾಲಕ್ಕೆ ತಕ್ಕಂತೆ ನೇತ್ರ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ವಿಧಾನಗಳು, ಆಧುನಿಕ ತಂತ್ರಜ್ಞಾನದ ನೆರವಿನ ಅವಕಾಶಗಳ ಸದ್ಬಳಕೆ ಕುರಿತಂತೆ ದೇಶದ ನಾನಾ ಭಾಗಗಳ ತಜ್ಞರನ್ನ ಆಹ್ವಾನಿಸಿ ಚಿಂತನ ಮಂಥನಕ್ಕೆ ಈ ಸಮ್ಮೇಳನ ಆಯೋಜಿಸಿರುವುದು ಗಮನಾರ್ಹವಾದುದು ಎಂದು ನುಡಿದರು.
ದೃಷ್ಟಿ ದೋಷ ನಿವಾರಣೆಗೆ ಜಾಗೃತಿ, ನಿರಂತರ ನೇತ್ರ ಶಸ್ತ್ರ ಚಿಕಿತ್ಸೆ, ಶಿಬಿರ ಆಯೋಜನೆ ಹೀಗೆ ಹತ್ತಾರು ವಿಧದಲ್ಲಿ ನೇತ್ರತಜ್ಞರು ದೇಶವ್ಯಾಪಿಯಾಗಿ ಶ್ರಮಿಸುತ್ತಿದ್ದಾರೆ. ಆದರೆ ಈಚೆಗೆ ಆಧುನಿಕ ಜಗತ್ತಿನ ಪರಿಣಾಮಗಳಿಂದ ನೇತ್ರ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳು, ಯುವಕರು, ವಯಸ್ಕರು, ವೃದ್ಧರು ಸೇರಿದಂತೆ ಎಲ್ಲರಲ್ಲೂ ಈ ಸಮಸ್ಯೆ ಕಾಣುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಪದ್ಮಶ್ರೀ ಡಾ.ಎಂ.ಎಂ ಜೋಶಿ ಅವರು ಮಾತನಾಡಿ, ಈ ನೇತ್ರ ತಜ್ಞರ ಸಮ್ಮೇಳನ ಉದ್ದೇಶ ದೇಶದ ನಾನಾ ಭಾಗಗಳಲ್ಲಿನ ನೇತ್ರ ತಜ್ಞರು ತಮ್ಮ ಜ್ಞಾನ ವಿನಿಮಯ ಮಾಡಿಕೊಳ್ಳಲು, ಯುವ ವೈದ್ಯರಿಗೆ ಸಹಕಾರಿಯಾಗಲು, ನೇತ್ರ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಜ್ಞಾನ ಪಡೆಯಲು ಆಯೋಜಿಸಿಕೊಂಡು ಬರಲಾಗಿದೆ. ಈ ಉಪಯುಕ್ತ ಸಮ್ಮೇಳನ ಪ್ರಯೋಜನ ಎಲ್ಲರಿಗೂ ಆಗಲಿ ಎಂದು ನುಡಿದರು.
ಹಿರಿಯ ನೇತ್ರ ತಜ್ಞರಾದ ಡಾ. ಗುರುಪ್ರಸಾದ್, ಡಾ. ರವಿ ನಾಡಿಗೇರ, ಕರ್ನಾಟಕ ನೇತ್ರ ತಜ್ಞರ ಸಂಸ್ಥೆಯ ಅಧ್ಯಕ್ಷ ಡಾ. ಕೆ.ವಿ. ಶಿವರಾಮ್, ಡಾ. ಚೈತ್ರಾ ರಾಮಮೂರ್ತಿ ವೇದಿಕೆಯಲ್ಲಿದ್ದರು.
ಡಾ.ಕೆ.ವಿ ಸತ್ಯಮೂರ್ತಿ ಸ್ವಾಗತಿಸಿದರು. ಡಾ.ಶ್ರೀನಿವಾಸ ಜೋಶಿ ಮುಖ್ಯಅತಿಥಿಗಳ ಪರಿಚಯ ಮಾಡಿದರು. ಡಾ.ಕೃಷ್ಣ ಪ್ರಸಾದ್ ಅವರು ಮೂವರು ಪ್ರಶಸ್ತಿ ಪುರಸ್ಕೃತ ಸಾಧನೆ, ಯಶೋಗಾಥೆ ವಿವರಿಸಿದರು. ಡಾ.ಶಿಲ್ಪಾ ಮಾಳೇದ ವಂದಿಸಿದರು.
ಸ್ಕ್ರೀನಿಂಗ್ ಟೈಮ್ ಹೆಚ್ಚು, ನೇತ್ರ ರಕ್ಷಣೆ ಸವಾಲು
ಈಚೆಗೆ ನಾನು ತಿಳಿದುಕೊಂಡ ಮಾಹಿತಿ ಪ್ರಕಾರ ಪ್ರತಿ ದಿನ ಒಬ್ಬ ವ್ಯಕ್ತಿಯ ಸ್ಕ್ರೀನಿಂಗ್ ಅವಧಿ ೬ರಿಂದ ೮ ತಾಸಿಗೆ ವಿಸ್ತರಿಸಿದೆ. ಗೆಜೆಟ್, ಮೊಬೈಲ್, ಕಂಪ್ಯೂಟರ್, ಟಿವಿ ವೀಕ್ಷಣೆ ಅವಧಿ ಹೆಚ್ಚಾಗಿದೆ. ಜೊತೆಗೆ ಪರಿಸರ ದುಷ್ಪರಿಣಾಮಗಳು ಕಾರಣವಾಗಿವೆ ಎಂದು ಸಚಿವ ಲಾಡ್ ಕಳವಳ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಶೇ. ೨೩ರಿಂದ ೨೫ ಲಕ್ಷದಷ್ಟು ಜನ ದೃಷ್ಟಿದೋಷ, ೩೨ ಕೋಟಿಯಷ್ಟು ಜನರು ನಾನಾ ರೀತಿಯಲ್ಲಿ ನೇತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ನೇತ್ರ ತಜ್ಞರು ತಮ್ಮ ಜ್ಞಾನ ವಿನಿಮಯ ಮಾಡಿಕೊಂಡು ಜನರಿಗೆ ಅತ್ಯುತ್ತಮ ನೇತ್ರ ಚಿಕಿತ್ಸೆ ನೀಡಲು ಈ ಸಮ್ಮೇಳನ ಸಹಕಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಚೆನ್ನೈ, ಪುಣೆ, ಕೋಲ್ಕತ್ತಾ ನೇತ್ರ ತಜ್ಞರಿಗೆ ಪ್ರಶಸ್ತಿ ಪ್ರದಾನ
ಚೆನ್ನೈನ ಸಂಕರ ನೇತ್ರಾಲಯದ ನೇತ್ರತಜ್ಞೆ ಡಾ. ಗೀತಾ ಅಯ್ಯರ್ ಅವರಿಗೆ ಪದ್ಮಶ್ರೀ ಡಾ.ಎಂ.ಎಂ ಜೋಶಿ ವಾಗ್ಮಿ ಪ್ರಶಸ್ತಿ, ಪುಣೆಯ ಪ್ರಸಿದ್ಧ ಯುವ ನೇತ್ರ ತಜ್ಞ ಡಾ. ಆದಿತ್ಯ ಕೇಳ್ಕರ್ ಅವರಿಗೆ ಪದ್ಮಶ್ರೀ ಡಾ.ಎಂ.ಎಂ ಜೋಶಿ
ಯುವ ಸಾಧಕ’ ಪ್ರಶಸ್ತಿ ಹಾಗೂ ಕೋಲ್ಕತ್ತಾದ ಹಿರಿಯ ನೇತ್ರತಜ್ಞ ಡಾ. ಸ್ವಪನ್ ಸಮಂತ ಅವರಿಗೆ `ಜೀವಮಾನ ಸಾಧನೆ’ ಪ್ರಶಸ್ತಿಗಳನ್ನು ಸಚಿವ ಸಂತೋಷ ಲಾಡ್, ಪದ್ಮಶ್ರೀ ಡಾ.ಎಂ.ಎಂ ಜೋಶಿ, ಡಾ. ಗುರುಪ್ರಸಾದ್, ಡಾ. ಕೃಷ್ಣಪ್ರಸಾದ್, ಡಾ. ಶ್ರೀನಿವಾಸ ಜೋಶಿ ಸೇರಿದಂತೆ ಸಂಸ್ಥೆಯ ನಿರ್ದೇಶಕರು ಪ್ರದಾನ ಮಾಡಿ ಗೌರವಿಸಿದರು.
