Home ತಾಜಾ ಸುದ್ದಿ ಆದೇಶದ ಹಿಂದಿನ ಕಾಣದ ಕೈಗಳು ಯಾವುವು?

ಆದೇಶದ ಹಿಂದಿನ ಕಾಣದ ಕೈಗಳು ಯಾವುವು?

0

ಮಿತ್ರ ಪಕ್ಷಗಳು ಹಾಗೂ ತನ್ನ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಹರಿಯ ಬಿಡುವಂತೆ ಸೂಚನೆ

ಬೆಂಗಳೂರು: ತೆಲಂಗಾಣ ರಾಜ್ಯಕ್ಕೆ 10 ಟಿಎಂಸಿ ನೀರು ಹರಿಯಬಿಡಲಾಗಿದೆ ಎಂದರೆ ಈ ನೀರು ಬಿಟ್ಟಿರುವ ಹಿಂದಿನ ಆದೇಶದ ಕಾಣದ ಕೈಗಳು ಯಾವುವು? ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ. ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕನ್ನಡಿಗರಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ತನ್ನ ಮಿತ್ರ ಪಕ್ಷ ಡಿಎಂಕೆ ಯನ್ನು ಓಲೈಸಲು ತಮಿಳುನಾಡಿಗೆ ನೀರು ಹರಿಯ ಬಿಟ್ಟು ಕಾವೇರಿ ತೀರದ ನಮ್ಮ ರೈತರ ಬದುಕಿಗೆ ಕೊಳ್ಳಿಯಿಟ್ಟಿತ್ತು, ಇದೀಗ ಕೃಷ್ಣಾ ತೀರದ ನಮ್ಮ ರೈತರ ಪರಿಶ್ರಮದ ಬೆವರಿನ ಬೆಳೆಗಳನ್ನು ಒಣಗಿಸಲು ಹೊರಟಿದೆ.

ಮಾನವೀಯತೆಯ ಹೆಸರಿನಲ್ಲಿ ತೆಲಂಗಾಣ ರಾಜ್ಯಕ್ಕೆ 1.5 ಟಿಎಂಸಿ ಯಷ್ಟು ನೀರು ಬಿಡಲಾಗಿದೆ ಎಂದು ಹೇಳಿರುವ ಸಚಿವ ಎಂ. ಬಿ. ಪಾಟೀಲ ಅವರಿಗೂ ತಿಳಿಯದಂತೆ 10 ಟಿಎಂಸಿ ನೀರು ಹರಿಯಬಿಡಲಾಗಿದೆ ಎಂದರೆ ಈ ನೀರು ಬಿಟ್ಟಿರುವ ಹಿಂದಿನ ಆದೇಶದ ಕಾಣದ ಕೈಗಳು ಯಾವುವು? ಕರ್ನಾಟಕ ಸರ್ಕಾರವನ್ನು ಯಾರು ನಿಯಂತ್ರಿಸುತ್ತಿದ್ದಾರೆ? ಜಲಸಂಪನ್ಮೂಲ ಇಲಾಖೆ ಸರ್ವಾಧಿಕಾರಿಯ ಮುಷ್ಠಿಯಲ್ಲಿದೆಯೇ? ಕರ್ನಾಟಕದ ಜಲ ಸಂಪತ್ತು, ಅರಣ್ಯ ಸಂಪತ್ತು ಹಾಗೂ ಪ್ರಾಕೃತಿಕ ಸಂಪತ್ತುಗಳ ಮೇಲೆ ನಿಯಂತ್ರಣ ಸಾಧಿಸಿರುವ ಕಾಂಗ್ರೆಸ್ ವರಿಷ್ಠ ಮಂಡಳಿ ಕರ್ನಾಟಕದ ನದಿಗಳಿಂದ ಹರಿಯುವ ನೀರನ್ನು ತನ್ನ ಮಿತ್ರ ಪಕ್ಷಗಳು ಹಾಗೂ ತನ್ನ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಹರಿಯ ಬಿಡುವಂತೆ ಸೂಚನೆ ನೀಡುತ್ತಿದೆ.

ರಾಜ್ಯದ ಮಣ್ಣಿನ ಮಕ್ಕಳ ಆಕ್ರೋಶ ಅದರಲ್ಲೂ ಉತ್ತರ ಕರ್ನಾಟಕದ ಕೃಷ್ಣಾ ತೀರದ ರೈತರು ಬೆವರು ಹರಿಸಿ ಬೆಳೆದಿರುವ ಬೆಳೆಗಳು ಈಗಾಗಲೇ ಒಣಗುತ್ತಿವೆ. ಇದರಿಂದ ಕಂಗಾಲಾಗಿರುವ ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ, ಈ ಕಾರಣಕ್ಕಾಗಿಯೇ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತ ರೈತನ ಆತ್ಮಕ್ಕೆ ಶಾಂತಿ ಕೋರಿ ಆ ಮೃತ ರೈತನ ಕುಟುಂಬದ ಪರವಾಗಿ ಬಿಜೆಪಿ ದನಿಯೆತ್ತಿಲಿದೆ.

ಈ ಕೂಡಲೇ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಬೆಳೆ ನಷ್ಟದ ಪರಿಹಾರ ನೀಡಬೇಕೆಂದು ಒತಾಯಿಸುತ್ತೇನೆ. ರಾಜ್ಯ ಸರ್ಕಾರ ತೆಲಂಗಾಣಕ್ಕೆ 10,000 ಟಿಎಂಸಿ ನೀರು ಬಿಟ್ಟಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ಬಿಜೆಪಿ ಈ ಭಾಗದ ರೈತರ ಪರವಾಗಿ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದಿದ್ದಾರೆ.

Exit mobile version