Home ತಾಜಾ ಸುದ್ದಿ ಅಮಿತ್‌ ಶಾ ಕುರಿತ ಹೇಳಿಕೆ : ರಾಹುಲ್ ವಿರುದ್ಧದ ವಿಚಾರಣೆಗೆ ತಡೆ

ಅಮಿತ್‌ ಶಾ ಕುರಿತ ಹೇಳಿಕೆ : ರಾಹುಲ್ ವಿರುದ್ಧದ ವಿಚಾರಣೆಗೆ ತಡೆ

0

ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಜಾರ್ಖಂಡ್‌ನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಮಾರ್ಚ್ 18, 2018 ರಂದು ಬಿಜೆಪಿಯನ್ನು ಟೀಕಿಸುವ ಭಾಷಣವನ್ನು ಗಾಂಧಿ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಭಾಷಣದ ವೇಳೆ ಅಂದಿನ ಗೃಹ ಸಚಿವ ಅಮಿತ್‌ ಶಾ ವಿರುದ್ದ ಆಕ್ಷೇಪಾರ್ಹ ಹೇಳಿಕೆಯನ್ನು ರಾಹುಲ್‌ ಹೇಳಿದ್ದರು ಎಂದು ಬಿಜೆಪಿ ಮುಖಂಡ ನವೀನ್ ಝಾ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಆರಂಭದಲ್ಲಿ, ರಾಂಚಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಝಾ ಅವರ ದೂರನ್ನು ವಜಾಗೊಳಿಸಿತ್ತು. ಆದರೆ ಮುಂದೆ, ರಾಂಚಿಯ ನ್ಯಾಯಾಂಗ ಆಯುಕ್ತರು ಸೆಪ್ಟೆಂಬರ್ 15, 2018 ರಂದು ದೂರಿನ ಅರ್ಜಿಯನ್ನು ವಜಾಗೊಳಿಸಿದ ಆದೇಶವನ್ನು ರದ್ದುಗೊಳಿಸಿ ಹೊಸದಾಗಿ ಪರಿಶೀಲಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಿಂತಿರುಗಿಸಿತ್ತು. ಅದರ ನಂತರ, ಮ್ಯಾಜಿಸ್ಟ್ರೇಟ್ ನವೆಂಬರ್ 28, 2018 ರಂದು ಹೊಸದಾಗಿ ಆದೇಶ ನೀಡಿ ರಾಹುಲ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 500 ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸಾಕಷ್ಟು ಪುರಾವೆಗಳಿವೆ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಹುಲ್‌ ಗಾಂಧಿ ಜಾರ್ಖಂಡ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499ರ ಅಡಿಯಲ್ಲಿ ಗಾಂಧಿಯವರ ಈ ಹೇಳಿಕೆಗಳು ಮೇಲ್ನೋಟಕ್ಕೆ ಮಾನಹಾನಿಕರವಾಗಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಹೈಕೋರ್ಟ್‌ನ ಈ ಆದೇಶವನ್ನು ರಾಹುಲ್‌ ಗಾಂಧಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. “ಜಾರ್ಖಂಡ್ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿ. ಮುಂದಿನ ಆದೇಶದವರೆಗೆ ವಿಚಾರಣೆಯಲ್ಲಿನ ಎಲ್ಲಾ ಪ್ರಕ್ರಿಯೆಗಳು ತಡೆಹಿಡಿಯಲ್ಪಡುತ್ತವೆ” ಎಂದು ಆದೇಶಿಸಿ, ಅರ್ಜಿಯ ಬಗ್ಗೆ ಪ್ರತಿಕ್ರಿಯೆ ಕೇಳಿದೆ.

Exit mobile version