Home ಅಪರಾಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಶಿಕ್ಷೆ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಶಿಕ್ಷೆ

0

ಮಂಗಳೂರು: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ(ಪೋಕ್ಸೋ-ಎಫ್ಟಿಎಸ್ಸಿ-೧) ಅಪರಾಧಿಗೆ ೧ ವರ್ಷ ಸಾದಾ ಜೈಲು ಮತ್ತು ೧೦ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳ್ತಂಗಡಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಸಜಿಪನಡು ಕಂಚಿನಡ್ಕದ ಜಮಾಲ್(೨೪) ಶಿಕ್ಷೆಗೊಳಗಾದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
೨೦೨೪ರ ಅ. ೫ರಂದು ಅಪ್ರಾಪ್ತ ವಿದ್ಯಾರ್ಥಿನಿಯು ತನ್ನ ಸಂಬಂಧಿಯ ಜೊತೆ ಬೆಳ್ತಂಗಡಿಯ ಐಟಿಐಯೊಂದಕ್ಕೆ ಕುಕ್ಕೇಡಿ ಗೋಳಿಯಂಗಡಿಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು. ಅ. ೧೦ ಮತ್ತು ೧೫ರಂದು ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ ೧೨ರಡಿ ಪೊಕ್ಸೊ ಮತ್ತು ಬಿಎನ್‌ಎಸ್ ೭೮ರಡಿ ಕೇಸು ದಾಖಲಾಗಿತ್ತು.
ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ವಿನಯ್ ದೇವರಾಜ್ ಆರೋಪಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ೨ ತಿಂಗಳು ಶಿಕ್ಷೆ ಅನುಭವಿಸಬೇಕು. ಅಲ್ಲದೆ ಸಂತ್ರಸ್ತ ವಿದ್ಯಾರ್ಥಿನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ೧ ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.
ವೇಣೂರು ಪೊಲೀಸ್ ಠಾಣೆಯ ಎಸ್‌ಐ ಶ್ರೀಶೈಲ್ ಟಿ. ಮುರಗೋಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.
ಬಿಎನ್‌ಎಸ್ ಕೇಸ್‌ನಲ್ಲಿ ಮೊದಲ ತೀರ್ಪು: ದೇಶದಲ್ಲಿ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತಾ) ಕಾನೂನು ೨೦೨೪ರ ಜುಲೈ ೧ರಿಂದ ಜಾರಿಗೆ ಬಂದಿದ್ದು, ಈ ಕಾನೂನಿನಡಿ ನೊಂದಣಿಯಾದ ಪೊಕ್ಸೊ ಪ್ರಕರಣದ ಮೊದಲ ತೀರ್ಪು ಪ್ರಕರಣ ಇದಾಗಿದೆ. ೨೦೨೪ರ ಅ. ೧೫ರಂದು ಪ್ರಕರಣ ದಾಖಲಾಗಿತ್ತು. ೨೦೨೫ರ ಫೆ. ೧೦ಕ್ಕೆ ತೀರ್ಪು ಹೊರಬಿದ್ದಿದೆ.

Exit mobile version