ಹುಬ್ಬಳ್ಳಿ: ಹಿಂದೂಪರ ಕಾರ್ಯಕರ್ತನ ಬಂಧನ ಖಂಡಿಸಿ ವಿಪಕ್ಷ ನಾಯಕ ಆರ್.ಅಶೋಕ ನೇತ್ರತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಹೃದಯಭಾಗದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಶಹರ ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರೆ ಮತ್ತೊಂದೆಡೆ, ಪೊಲೀಸರು ಮುಂಜಾಗೃತಾ ದೃಷ್ಟಿಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರು. ಬುಧವಾರ ರಜಾ ದಿನ ಆದ್ದರಿಂದ ಕೆಲ ಅಂಗಡಿಕಾರರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ತೆರೆದೇ ಇರಲಿಲ್ಲ.
ಅಂಗಡಿ ಮುಂಗಟ್ಟುಗಳು ತೆರೆಯದ ಕಾರಣ ಬ್ರಾಡ್ವೆ ರಸ್ತೆ, ಮರಾಠಾಗಲ್ಲಿ, ಕೊಪ್ಪೀಕರ ರಸ್ತೆ, ಮ್ಯಾದರ್ ಓಣಿ, ದುರ್ಗದ ಬೈಲ್ ವೃತ್ತ, ಶಾಬಜಾರ್ ರಸ್ತೆ, ಜವಳಿ ಸಾಲ್ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ನಗರಾದ್ಯಂತ ಸಾವಿರಾರು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರಿಂದ ನಗರದಲ್ಲಿ ಬುಧವಾರ ಅಘೋಶಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.