Home News ಅಕ್ಷತೆ ಬಿದ್ದ‌ ಕೆಲವೇ ಕ್ಷಣದಲ್ಲಿ ಮದುಮಗ ಸಾವು

ಅಕ್ಷತೆ ಬಿದ್ದ‌ ಕೆಲವೇ ಕ್ಷಣದಲ್ಲಿ ಮದುಮಗ ಸಾವು

ಜಮಖಂಡಿಯಲ್ಲಿ ಹೃದಯವಿದ್ರಾವಕ ಘಟನೆ

ಬಾಗಲಕೋಟೆ: ಅಕ್ಷತೆ ಬಿದ್ದು‌ ಕೆಲವೇ ನಿಮಿಷಗಳಲ್ಲಿ ಮದುಮಗ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಮಖಂಡಿಯಲ್ಲಿ ನಡೆದಿದೆ.
ಜಮಖಂಡಿ ತಾಲೂಕು ಕುಂಬಾರಹಳ್ಳದ ರಾಜ್ಯ ಸೈಕ್ಲಿಂಗ್ ಸಂಸ್ಥೆ ಕಾರ್ಯದರ್ಶಿ ಶಂಕರ ಕರುಣಿ ಅವರ ಪುತ್ರ ಪ್ರವೀಣ(೨೫) ಮೃತಪಟ್ಟ ದುರ್ದೈವಿ. ವೃತ್ತಿಯಲ್ಲಿ ಕೃಷಿಕನಾಗಿರುವ ಪ್ರವೀಣ್ ಹಾಗೂ ಪೂಜಾ ಅವರ ವಿವಾಹ ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆಯಿತು. ಬೆಳಗ್ಗೆಯಿಂದ ಪೂಜೆ ವಿಧಾನಗಳಲ್ಲಿ ಪ್ರವೀಣ್ ಉತ್ಸಾಹದಿಂದ ಭಾಗವಹಿಸಿದ್ದರು.

ಮಧ್ಯಾಹ್ನ ೧೨.೧೫ಕ್ಕೆ ಅಕ್ಷತಾರೋಪಣಕ್ಕಾಗಿ ವೇದಿಕೆ ಏರಿದರು. ತಾಳಿ ಕಟ್ಟಿ, ಹಾರ ಬದಲಾಯಿಸಿಕೊಂಡು ಖುಷಿಯಿಂದ ಜನರ ಶುಭಾಶಯ ಸ್ವೀಕರಿಸುತ್ತಿದ್ದರು. ಆಗ ಪ್ರವೀಣ್‌ಗೆ ತಲೆ ಸುತ್ತು ಬಂದಂತಾಗಿದೆ, ತಂದೆ ಶ್ರೀಶೈಲ ಅವರಿಗೆ ಪಿಸುಮಾತಿನಲ್ಲಿ ವಿಷಯ ಹೇಳಿದರು. ತಂದೆ ನೀರು ತರಿಸಿ ಕೊಡುವಷ್ಟರಲ್ಲಿ ಪ್ರವೀಣ್ ಕುಸಿದುಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಯುವಕ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಪ್ರವೀಣ್ ಸಾವಿನಿಂದ ಸಂಭ್ರಮದಲ್ಲಿದ್ದ ಮದುವೆ ಮನೆ ಮೌನವಾಯಿತು. ತಂದೆ, ತಾಯಿಗೆ ದಿಕ್ಕು ತೋಚದಂತಾಯಿತು. ಮದುವೆಗೆ ಬಂದ ಜನ ಪ್ರವೀಣ್ ಅಂತ್ಯಕ್ರಿಯೆಗೆ ಜತೆಯಾದರು.

Exit mobile version