ಲೋಕಾಯುಕ್ತ ದಾಳಿ: ಬರೋಬರಿ ಒಂದೂವರೆ ಕೆ.ಜಿ. ಬಂಗಾರ ಪತ್ತೆ!
ಆಹಾರ ಸುರಕ್ಷತಾ ಅಧಿಕಾರಿ ಮನೆ ಮೇಲೆ : ಆದಾಯಕ್ಕಿಂತ ಶೇ.೧೫೦ರಷ್ಟು ಹೆಚ್ಚುವರಿ ಆಸ್ತಿ ಪತ್ತೆ
ದಾವಣಗೆರೆ: ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿ ಡಾ.ಜೆ.ಎಸ್.ನಾಗರಾಜ ಅವರಿಗೆ ಸೇರಿದ ಐದು ಸ್ಥಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಡಾ.ಜೆ.ಎಸ್.ನಾಗರಾಜ ಅವರ ಮನೆ, ತಂದೆ ಷಣ್ಮುಖಪ್ಪ ಅವರ ನಿವಾಸ, ಫಾರ್ಮ್ಹೌಸ್, ಕಚೇರಿ, ಕುಟುಂಬದ ಹಿಡಿತದಲ್ಲಿರುವ ಸಹಕಾರ ಸಂಘದ ಕಚೇರಿ ಹಾಗೂ ಹಾವೇರಿ ಜಿಲ್ಲಾ ಪ್ರಭಾರಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲಾ ಅಂಕಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ಅಲ್ಲಿನ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ೧ ಕೆ.ಜಿ. ೫೯೭ ಗ್ರಾಂ ಬಂಗಾರ, ೫ ಕೆ.ಜಿ.ಬೆಳ್ಳಿ, ೧.೫೦ ಲಕ್ಷ ರೂ. ನಗದು, ಕಾರು, ಬೈಕ್ ಸೇರಿದಂತೆ ೩೮ ಲಕ್ಷ ರೂ. ಮೌಲ್ಯದ ವಾಹನಗಳ ದಾಖಲೆಗಳು, ೩೨ ಲಕ್ಷ ರೂ. ಮೌಲ್ಯದ ಫರ್ನಿರ‍್ಸ್, ಒಂದು ನಿವೇಶನ, ನಾಲ್ಕು ಮನೆಗಳು, ಎಂಟು ಎಕರೆ ಕೃಷಿ ಭೂಮಿ ಪತ್ತೆಯಾಗಿದ್ದು, ಒಂದು ಲಾಕರ್ ಇದೆ ಎನ್ನಲಾಗಿದ್ದು, ಪತ್ತೆಯಾಗಿಲ್ಲ. ಇನ್ನು ಶೋಧ ಕಾರ್ಯ ನಡೆಯುತ್ತಿದೆ. ಈವರೆಗೂ ಅವರ ಆದಾಯಕ್ಕಿಂತ ಶೇ.೧೫೦ರಷ್ಟು ಹೆಚ್ಚುವರಿಯಾಗಿ ಆಸ್ತಿಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಎಸ್ಪಿ ಕೌಲಾಪುರೆ ಮಾಹಿತಿ ನೀಡಿದ್ದಾರೆ.
ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿದ ಆರೋಪದ ಮೇರೆಗೆ ಡಾ.ಜೆ.ಎಸ್.ನಾಗರಾಜ ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಪಿಐ ಪ್ರಭು, ಸಿಪಿಐಗಳಾದ ಮಧುಸೂದನ್, ಸರಳ, ಡಿವೈಎಸ್ಪಿ, ಇನ್ಸ್ಪ್ಪೆಕ್ಟರ್ ಸೇರಿದಂತೆ ಐದು ತಂಡಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.