Home ತಾಜಾ ಸುದ್ದಿ ನಿಜವಾದ ಆಪರೇಷನ್ ಮಾಡುವುದು ಜನರು

ನಿಜವಾದ ಆಪರೇಷನ್ ಮಾಡುವುದು ಜನರು

0

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪೆನ್ ಡ್ರೈವ್ ಬಿಡುಗಡೆ ಮಾಡಿದರೆ ಅದರಲ್ಲಿರುವ ವಿಷಯಗಳು ಗೊತ್ತಾಗುತ್ತದೆ. ಅದರಲ್ಲಿ ಏನಾದರೂ ಭ್ರಷ್ಟಾಚಾರದ ಸಾಕ್ಷಾಧಾರಳಿದ್ದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಂಡಿತವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾರ್ಟಿ ಡಬಲ್ ಡೆಕ್ಕರ್ ಬಸ್ ಇದ್ದ ಹಾಗೆ,‌ ಪಕ್ಷದ ಬಾಗಿಲು ಸದಾ ತೆರೆದಿರುತ್ತೆ ಯಾರು ಬೇಕಾದರೂ ಬರಬಹುದು. ನಮ್ಮ ಪಾರ್ಟಿಗೆ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಆಪರೇಷನ್ ಮಾಡುವುದು ಜನರು, ಬಿಜೆಪಿಯವರು ಸಾವಿರಾರು ಕೋಟಿ ಖರ್ಚು ಮಾಡಿ ರಾಹುಲ್ ಗಾಂಧಿ ಇಮೇಜ್ ಡೌನ್ ಮಾಡುವ ಯತ್ನ ಮಾಡಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಕಿಡಿಕಾರಿದರು.
ಇನ್ನು ಕಾರ್ಮಿಕ ಇಲಾಖೆಯ ಹಣವನ್ನು ಭಾಗ್ಯ ಯೋಜನೆಗಳಿಗೆ ಕೊಟ್ಟಿಲ್ಲ, ಬಿಜೆಪಿ ನಾಯಕರು ಕೇವಲ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತಾಡ್ತಾರೆ. ಅಭಿವೃದ್ಧಿಗೆ ಸಂಬಂಧಪಟ್ಟ ವಿಚಾರಗಳನ್ನು ಚರ್ಚೆ ಮಾಡಲ್ಲ. ಬಿಜೆಪಿ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಿದ್ರೆ ಸ್ವಾಗತವಿದೆ, ಅವರೊಂದಿಗೆ ಚರ್ಚಿಸಲು ನಾವು ಸಿದ್ಧ. ಐದು ಭಾಗ್ಯಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ, ಸರ್ಕಾರ ಬಂದು ಎರಡು ತಿಂಗಳಷ್ಟೇ ಆಗಿದೆ. ಸರ್ಕಾರದ ಹೆಸರು ಕೆಡಿಸಲು ವಿನಾಕಾರಣ ಟ್ರಾನ್ಸ್ಫರ್ ಹಗರಣ ಅನ್ನೋ ವಿಚಾರ ಮುನ್ನೆಲೆಗೆ ತರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿಗಳಿಗೆ ಟೆಂಡರ್ ಆಗಿ ಹಣ ಬಿಡುಗಡೆಯಾಗಿಲ್ಲ, ಭ್ರಷ್ಟಾಚಾರ ಹೇಗೆ ಆಗುತ್ತೆ?‌ ಬಿಜೆಪಿಯವರು ಮುಂದಿನ ಐದು ವರ್ಷ ನಡೆಯುವ ಕಾಮಗಾರಿಗೆ ಈಗಲೇ ಟೆಂಡರ್ ಕರೆದಿದ್ದರು, ಅದಕ್ಕೆ ಉತ್ತರ ಕೊಡಲಿ ಎಂದು ಸಚಿವ ಸಂತೋಷ ಲಾಡ್ ಪ್ರಶ್ನೆ ಮಾಡಿದರು.

Exit mobile version