ಬೆಂಗಳೂರು: ತಂತ್ರಜ್ಞಾನ ಮತ್ತು ಸೇವಾ ಮನೋಭಾವ ಜೊತೆಗೂಡಿದರೆ, ದೇಶದಲ್ಲಿ ಸರ್ಕಾರದ ವ್ಯವಸ್ಥೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಿಗೆ ತಲುಪಿಸಲು ಸಾಧ್ಯ ಎನ್ನುವುದನ್ನು ಗ್ರಾಮ ಒನ್ ಕಾರ್ಯಕ್ರಮದ ಯಶಸ್ಸು ನಿರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಒನ್ ಯೋಜನೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಾವುದಾದರೂ ಒಂದು ವ್ಯವಸ್ಥೆಗೆ ಚಲನಾಶೀಲವಾದ ಶಕ್ತಿಯಿದ್ದರೆ ವೇಗವಾಗಿ ಮುಂದುವರೆಸಿಕೊಂಡು ಹೋಗಬಹುದು. ನಿಂತಲ್ಲೇ ನಿಂತರೆ ತುಕ್ಕು ಹಿಡಿಯುತ್ತದೆ. ಸರ್ಕಾರದ ಚಕ್ರ ನಿರಂತರವಾಗಿ ಚಲಿಸಲು ಕೆಳಹಂತದ ಕೆಲಸಗಳು ಸರಿಯಾಗಿ ನಡೆಯಬೇಕು. ಜನರ ಬೇಕುಬೇಡಗಳ ಆಧಾರದ ಮೇಲೆ ಬಹಳಷ್ಟು ಸೇವೆಗಳು ಒದಗಿಸಲಾಗುತ್ತಿದೆ ಎಂದರು.
ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಜಾರಿಯಲ್ಲಿದೆ. ಗ್ರಾಮ್ ಒನ್ ಕೇಂದ್ರದಿಂದ ಬಂದ ಅರ್ಜಿಗಳು ವಿಲೇವಾರಿ ಆಗಲು ವಿಳಂಬವಾದರೆ ತಹಸಿಲ್ದಾರ ಕಚೇರಿಗೂ ಇದಕ್ಕೂ ವ್ಯತ್ಯಾಸ ಇರುವುದಿಲ್ಲ. ಪ್ರಾಮಾಣಿಕತೆಯಿಂದ, ದಕ್ಷತೆಯಿಂದ, ವೇಗವಾಗಿ ಕೆಲಸಮಾಡಬೇಕು ಎಂದರು.