Home ಅಪರಾಧ ಜ್ಯೋತಿಷಿಯ ಜಾಹೀರಾತು ನಂಬಿ ಹಣ ಕಳಕೊಂಡ ಮಹಿಳೆ

ಜ್ಯೋತಿಷಿಯ ಜಾಹೀರಾತು ನಂಬಿ ಹಣ ಕಳಕೊಂಡ ಮಹಿಳೆ

0

ಶಿವಮೊಗ್ಗ: ಯೂಟ್ಯೂಬ್‌ನಲ್ಲಿ ಬಂದ ಭವಿಷ್ಯ ಹೇಳುವವನ ಜಾಹೀರಾತು ನಂಬಿ ಮಹಿಳೆಯೊಬ್ಬಳು ೯ ಲಕ್ಷ ರೂ. ಕಳೆದುಕೊಂಡಿದ್ದು, ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯೊಬ್ಬರು ತಮಗಾದ ಸಮಸ್ಯೆಯ ಬಗ್ಗೆ ಪರಿಹಾರಕ್ಕಾಗಿ ಹುಡುಕಾಟ ನಡೆಸಿದ್ದರು. ಅದೇ ಸಂದರ್ಭದಲ್ಲಿ ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿದ್ದ ಜ್ಯೋತಿಷ್ಯದ ಜಾಹೀರಾತು ನೋಡಿ ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದರು.
ಆಗ ಜ್ಯೋತಿಷಿ ನಿಮಗೆ ಬಹುದೊಡ್ಡ ಸಮಸ್ಯೆಯಿದೆ ಎಂಬ ನಾನಾ ಕಾರಣಗಳನ್ನು ಹೇಳಿ, ಪದೇ ಪದೇ ಗೂಗಲ್ ಪೇ ಮಾಡಿಸಿಕೊಳ್ಳುತ್ತಿದ್ದ. ಮಹಿಳೆಯಿಂದ ಸುಮಾರು ೬,೩೭,೮೫೦ ರೂ.ಗಳನ್ನು ಪಡೆದಿದ್ದಾನೆ. ಇಷ್ಟು ಹಣ ಕಳೆದುಕೊಂಡ ಮೇಲೆ ಮಹಿಳೆಗೆ ಅನುಮಾನ ಬಂದಿದೆ. ಅಷ್ಟೊತ್ತಿಗೆ ಕರೆ ಮಾಡಿದ ಅವನು, ನನಗೆ ಆಕ್ಸಿಡೆಂಟ್ ಆಗಿತ್ತು. ನಾನು ಕೋಮಾದಲ್ಲಿದ್ದೆ. ಈಗ ಚೇತರಿಸಿಕೊಂಡಿದ್ದೇನೆ. ನಾನು ನಿನಗೆ ಹಣವನ್ನು ಹೊಂದಿಸಲು ಆಗುವುದಿಲ್ಲ. ನಮ್ಮ ದೇವಸ್ಥಾನದಲ್ಲಿ ನನಗಿಂತ ಮೇಲಿನ ವ್ಯಕ್ತಿಯ ನಂಬರ್ ಕೊಡುತ್ತೇನೆ, ಅವರಿಗೆ ಫೋನ್ ಮಾಡಿ. ಅವರು ನಿಮ್ಮ ಹಣವನ್ನು ವಾಪಸ್ ಕೊಡುತ್ತಾರೆ ಎಂದು ಹೇಳಿದ್ದಾನೆ.
ಇದನ್ನು ನಂಬಿದೆ ಮಹಿಳೆ ಆ ನಂಬರ್‌ಗೂ ಕಾಲ್ ಮಾಡಿದ್ದಾಳೆ. ಆತ ಕೂಡ ನಿಮಗೆ ಹಣ ಬರಬೇಕಾದರೆ ಸ್ವಲ್ಪ ಖರ್ಚಾಗುತ್ತದೆ. ನನ್ನ ಮೊಬೈಲ್ ನಂಬರ್‌ಗೆ ಹಣ ಹಾಕಿ ಎಂದು ಹೇಳಿದ್ದಾನೆ. ಆತನ ಅಕೌಂಟ್‌ಗೂ ಈ ಮಹಿಳೆ ಹಣ ಹಾಕಿದ್ದಾರೆ. ಒಟ್ಟಾರೆ ಇಬ್ಬರಿಗೂ ಒಟ್ಟು ೯,೪೪,೮೫೦ ರೂ.ಗಳನ್ನು ವರ್ಗಾವಣೆ ಮಾಡಿದ್ದಾಳೆ. ಆನಂತರವೇ ಆಕೆಗೆ ತಾನು ಮೋಸ ಹೋದದ್ದು ಗೊತ್ತಾಗಿದೆ. ದೂರು ದಾಖಲಿಸಿಕೊಂಡ ಸಿಇಎನ್ ಪೊಲೀಸರು ಇದೀಗ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

Exit mobile version