Home ತಾಜಾ ಸುದ್ದಿ ಗುಣಮಟ್ಟದ ಶಿಕ್ಷಣ, ಡಿಜಿಟಲ್ ಕಲಿಕೆಗೆ ಒತ್ತು

ಗುಣಮಟ್ಟದ ಶಿಕ್ಷಣ, ಡಿಜಿಟಲ್ ಕಲಿಕೆಗೆ ಒತ್ತು

0

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ 8ನೇ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಉನ್ನತ ಶಿಕ್ಷಣ, ಡಿಜಿಟಲ್ ಕಲಿಕೆ, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಹೊಸ ಸುಧಾರಣೆಗಳು ಮತ್ತು ಗ್ರಾಮೀಣ ಉದ್ಯೋಗಕ್ಕೆ ಒತ್ತು ನೀಡಲಾಗಿದೆ.
ಸಂಸತ್ತಿನಲ್ಲಿ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು, ಈ ಬಾರಿ ಸರ್ಕಾರದ ಮುಖ್ಯ ಗಮನವು ತ್ವರಿತ ಆರ್ಥಿಕ ಬೆಳವಣಿಗೆಯಾಗಿದೆ ಎಂದು ಹೇಳಿದರು. ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿಯನ್ನು ಸುಧಾರಿಸುವ ಮೂಲಕ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸುವತ್ತ ಹೆಜ್ಜೆ ಇಡಲಾಗುತ್ತಿದೆ. ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಬಜೆಟ್ 2025ರಲ್ಲಿ ಯಾವ ದೊಡ್ಡ ಘೋಷಣೆಗಳನ್ನು ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ.

ಅಭಿವೃದ್ಧಿ ಹೊಂದಿದ ಭಾರತಕ್ಕೆ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಅಗತ್ಯ:
ಅಭಿವೃದ್ಧಿ ಹೊಂದಿದ ಭಾರತದ ಗುರಿಯು ಬಡತನ ಮುಕ್ತ ದೇಶ, 100% ಉತ್ತಮ ಶಾಲಾ ಶಿಕ್ಷಣ, ಕೈಗೆಟುಕುವ ಮತ್ತು ಅತ್ಯುತ್ತಮ ಆರೋಗ್ಯ ಸೇವೆಗಳು, ನುರಿತ ಕಾರ್ಮಿಕರು, ಮಹಿಳೆಯರ ಆರ್ಥಿಕ ಸಹಭಾಗಿತ್ವ ಮತ್ತು ರೈತರ ಸಬಲೀಕರಣವನ್ನು ಆಧರಿಸಿದೆ ಎಂದು ಹಣಕಾಸು ಸಚಿವರು ಹೇಳಿದರು.

ಶಾಲೆಗಳಿಗೆ ಬ್ರಾಡ್​ಬ್ಯಾಂಡ್:
ದೇಶದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಇಂಟರ್​ನೆಟ್​ ಸೌಲಭ್ಯ ಕಲ್ಪಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಶಿಕ್ಷಣ ವಲಯದಲ್ಲಿ ಸಂಪೂರ್ಣ ಬದಲಾವಣೆ ತರುವ ವಿಚಾರದಲ್ಲಿ ಎಲ್ಲಾ ಸರ್ಕಾರಿ ಸೆಕಂಡರಿ ಸ್ಕೂಲ್​ಗಳಿಗೆ ಬ್ರಾಡ್​ಬ್ಯಾಂಡ್​ ಕನೆಕ್ಟಿವಿಟಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಎಲ್ಲಾ ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸಲಾಗುವುದು, ಇದು ಡಿಜಿಟಲ್ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಸುಧಾರಿಸುತ್ತದೆ.

ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್‌:
ಒಟ್ಟು 50 ಸಾವಿರ ಟಿಂಕರಿಂಗ್ ಲ್ಯಾಬ್​​ಗಳನ್ನ ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಲಾಗುವುದು. ಇದರ ಮೂಲಕ ವಿದ್ಯಾರ್ಥಿಗಳ ಕಲಿಕೆಯಲ್ಲಿ ವೈಜ್ಞಾನಿಕತೆ ಮತ್ತು ಕುತೂಹಲವನ್ನು ಹೆಚ್ಚಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ಭಾಷಾ ಪುಸ್ತಕ ಯೋಜನೆ:
ಸ್ವತಂತ್ರ ಭಾರತೀಯ ಭಾಷಾ ಪುಸ್ತಕ ಯೋಜನೆಯನ್ನು ತರಲಾಗುವುದು. ಇದು ವಿದ್ಯಾರ್ಥಿಗಳಿಗೆ ವಿಷಯಗಳ ಅವರದೇ ಭಾಷೆಯಲ್ಲಿ ಅರ್ಥವಾಗಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಐಐಟಿ ವಿಸ್ತರಣೆ:
ಕಳೆದ 10 ವರ್ಷಗಳಲ್ಲಿ 23 ಐಐಟಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಶೇ. 100ರಷ್ಟು ಹೆಚ್ಚಾಗಿದೆ. ಐಐಟಿಗಳನ್ನು ಮತ್ತಷ್ಟು ವಿಸ್ತರಣೆ ಹಾಗೂ ಹೆಚ್ಚಿನ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. 2014ರ ನಂತರ ಪ್ರಾರಂಭವಾದ ೫ ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಸೃಷ್ಟಿಸಲಾಗುವುದು, ಇದರಿಂದಾಗಿ ೬,೫೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುತ್ತದೆ. ಐಐಟಿ ಪಾಟ್ನಾದಲ್ಲಿ ಹಾಸ್ಟೆಲ್ ಮತ್ತು ಇತರ ಮೂಲಸೌಕರ್ಯ ಸಾಮರ್ಥ್ಯವನ್ನು ಸಹ ವಿಸ್ತರಿಸಲಾಗುವುದು.

ವೈದ್ಯಕೀಯ ಸೀಟು:
ವೈದ್ಯಕೀಯ ಕಾಲೇಜಿಗಳಲ್ಲಿ ಸೀಟುಗಳ ಸಂಖ್ಯೆ ಶೇ. 100ರಷ್ಟು ಹೆಚ್ಚಳವಾಗಲಿವೆ ಎಂದಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ 10,000 ಹೊಸ ಸೀಟುಗಳನ್ನು ಸೇರಿಸಲಾಗುವುದು, ಮುಂದಿನ ಐದು ವರ್ಷಗಳಲ್ಲಿ ಒಟ್ಟು 75,000 ಹೊಸ ವೈದ್ಯಕೀಯ ಸೀಟುಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ, ಆ ಮೂಲಕ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುತ್ತದೆ.

ದೇಶದಲ್ಲಿ 5 ರಾಷ್ಟ್ರೀಯ ಕೌಶಲ್ಯ ಕೇಂದ್ರ:
ಯುವಕರಿಗೆ ಜಾಗತಿಕ ಮಟ್ಟದ ಕೌಶಲ್ಯ ತರಬೇತಿ ನೀಡಲು 5 ರಾಷ್ಟ್ರೀಯ ಶ್ರೇಷ್ಠ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಕೇಂದ್ರಗಳು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡುತ್ತವೆ.

Exit mobile version