Home ಅಪರಾಧ ಗಾಂಜಾ ಸೇವಿಸುತ್ತಿದ್ದ ಯುವಕರಿಂದ ಅಬಕಾರಿ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ

ಗಾಂಜಾ ಸೇವಿಸುತ್ತಿದ್ದ ಯುವಕರಿಂದ ಅಬಕಾರಿ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ

0

ಶಿವಮೊಗ್ಗ: ಗಾಂಜಾ ಸೇವಿಸುತ್ತಿರುವ ಅನುಮಾನದ ಮೇರೆಗೆ ಪರಿಶೀಲನೆಗೆ ತೆರಳಿದ್ದ ಅಬಕಾರಿ ಇಲಾಖೆ ಸಿಬ್ಬಂದಿ ಮತ್ತು ಹೋಮ್‌ಗಾರ್ಡ್ ಮೇಲೆ ಮೂವರು ಯುವಕರು ಮನಸೋಯಿಚ್ಛೆ ಥಳಿಸಿದ್ದಾರೆ. ಶಿವಮೊಗ್ಗ–ಹೊಳೆಹೊನ್ನೂರು ರಸ್ತೆಯ ಲಾಡ್ಜ್ ಒಂದರ ಸಮೀಪ ಗಾಂಜಾ ಸೇವಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಅಬಕಾರಿ ಡಿವೈಎಸ್‌ಪಿ ಸೂಚನೆ ಮೇರೆಗೆ ಅಬಕಾರಿ ಕಾನ್ಸ್ಟೇಬಲ್ ಪ್ರಭು ಮತ್ತು ಹೋಮ್ ಗಾರ್ಡ್ ಯುಸುಫ್‌ಖಾನ್ ಸ್ಥಳಕ್ಕೆ ತೆರಳಿದ್ದರು.
ಸ್ಥಳದಲ್ಲಿ ಎರಡು ಬೈಕ್‌ಗಳ ಮೇಲೆ ಕುಳಿತಿದ್ದ ಮೂವರು ಯುವಕರ ಪರಿಶೀಲನೆಗೆ ತೆರಳಿದ್ದ ಕಾನ್‌ಸ್ಟೇಬಲ್ ಪ್ರಭುಗೆ ಮೂವರೂ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೆ ಮುಂದಾದಾಗ ಕಾನ್‌ಸ್ಟೇಬಲ್ ಪ್ರಭು ಮತ್ತು ಹೋಮ್‌ಗಾರ್ಡ್ ಯುಸುಫ್ ಖಾನ್ ತಪ್ಪಿಸಿಕೊಂಡು ಸಮೀಪದ ಬಾರ್‌ನಲ್ಲಿ ರಕ್ಷಣೆ ಪಡೆದಿದ್ದರು. ಅಲ್ಲಿಗೂ ಬಂದ ಯುವಕರು ಕಾನ್‌ಸ್ಟೇಬಲ್ ಮತ್ತು ಹೋಮ್‌ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟು ಹೊತ್ತಿಗೆ ಅಬಕಾರಿ ಇಲಾಖೆಯ ಇತರೆ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಇಬ್ಬರು ಯುವಕರು ಸಿಕ್ಕಿಬಿದ್ದಿದ್ದಾರೆ. ಇವರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕಾಶ ಮತ್ತು ಕಿಶೋರ ಎಂದು ಗುರುತಿಸಲಾಗಿದೆ. ಮತ್ತೋರ್ವ ಪರಾರಿಯಾಗಿದ್ದಾನೆ.
ಗಾಯಗೊಂಡಿದ್ದ ಅಬಕಾರಿ ಕಾನ್‌ಸ್ಟೇಬಲ್ ಪ್ರಭು ಮತ್ತು ಹೋಮ್‌ಗಾರ್ಡ್ ಯುಸುಫ್ ಖಾನ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version