Home News ಕೇಂದ್ರ ಪುರಸ್ಕೃತ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸಿ

ಕೇಂದ್ರ ಪುರಸ್ಕೃತ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸಿ

ಮೈಸೂರು: ಕೇಂದ್ರ ಪುರಸ್ಕೃತ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಪ್ಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸಬೇಕು ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕೆ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಜಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದ್ದು ಬೆಳೆ ಹಾನಿ ಆಗಿರುವ ಕುರಿತು ನಿಖರವಾದ ವರದಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದರು.
ಮೈಸೂರು ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಜಿಲ್ಲೆಯ ಎನ್ ಹೆಚ್‌ಗಳಲ್ಲಿ ಇರುವ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ದುರಸ್ತಿ ಮಾಡಬೇಕು. ಚಾಮುಂಡಿ ಬೆಟ್ಟದ ಪ್ರಸಾದ್ ಯೋಜನೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕು. ಸ್ವದೇಶಿ ದರ್ಶನ್ ಯೋಜನೆಯ ಪ್ರಗತಿ ಉತ್ತಮವಾಗಿ ಆಗಬೇಕು. ಸಿದ್ದಲಿಂಗಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಉತ್ತಮವಾಗಿ ಆಗುತ್ತಿಲ್ಲ ಎಂದು ದೂರುಗಳು ಬಂದಿದ್ದು ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ ಅವರು ಮಾತನಾಡಿ ನಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ನಮ್ಮ ಗಮನಕ್ಕೆ ತರಬೇಕು. ಪಾರ್ಕ್‌ಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನನ್ನ ಗಮನಕ್ಕೆ ಇಲ್ಲ ಎಂದು‌ ಹೇಳಿದರು.
ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಮೈಸೂರು ಕುಶಾಲನಗರ ಎನ್‌ಹೆಚ್ 275 ಗಾಗಿ ಶೇಕಡಾ 95 ರಷ್ಟು ಭೂಮಿ ವಶಪಡಿಸಿಕೊಳ್ಳಲಾಗಿದೆ. ಮೈಸೂರು ವಿಮಾನ ನಿಲ್ದಾಣದ ರನ್ ವೇ ಹೆಚ್ಚಳ ಮಾಡಲು 240 ಎಕರೆ ಪ್ರದೇಶ ಅವಶ್ಯಕತೆ ಇತ್ತು. ಈಗಾಗಲೇ ಬಹುತೇಕ ಭೂಮಿ ವಶಕ್ಕೆ ಪಡೆದಿದ್ದು ಯುಟಿಲಿಟಿ ಶಿಫ್ಟಿಂಗ್ ಮಾಡಬೇಕು. ಕಾಮಗಾರಿ ಟೆಂಡರ್ ಹಂತದಲ್ಲಿ ಇದೆ ಎಂದರು.
ಅಧಿಕಾರಿಗಳು ಮಾಹಿತಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಶೇಕಡಾ 82 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶೇಕಡಾ 100% ಪ್ರಗತಿ ಸಾಧಿಸಲಾಗಿದೆ. ನರೇಗಾ ಯೋಜನೆಯಡಿ ಉತ್ತಮ ಪ್ರಗತಿ ಆಗುತ್ತಿದೆ. ಮಾರ್ಚ್ ಅಂತ್ಯಕ್ಕೆ ಗುರಿ ತಲುಪಲಾಗುವುದು. ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಗ್ರಾಮ ಪಂಚಾಯತ್ ವಾರು ಸ್ಥಾಪಿಸಲಾಗಿದೆ. ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿ 98 ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಬಾರಿ ವಾಡಿಕೆಗಿಂತ 24% ಹೆಚ್ಚುವರಿ ಮಳೆ ಆಗಿದೆ. ಶೇಕಡಾ 53 ಬಿತ್ತನೆ ಆಗಿದೆ. ತಂಬಾಕು ಬೆಳೆಗೆ ಪರ್ಯಾಯವಾಗಿ ಬೇರೆ ತೋಟಗಾರಿಕೆ ಬೆಳೆ ಬೆಳೆಯಲು ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಡಿ ಹರೀಶ್ ಗೌಡ, ದಿಶಾ ಸಮಿತಿ ಸದಸ್ಯರಾದ ಅಶ್ವಿನ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ಸಮಿತಿಯ ನಾಮ ನಿರ್ದೇಶಿತ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version