Home ನಮ್ಮ ಜಿಲ್ಲೆ ಚಿಕ್ಕಮಗಳೂರು ಕಾರು-ಬಸ್ ನಡುವೆ ಭೀಕರ ಅಪಘಾತ: ತಾಯಿ ಮಗ ಸ್ಥಳದಲ್ಲೇ ಸಾವು

ಕಾರು-ಬಸ್ ನಡುವೆ ಭೀಕರ ಅಪಘಾತ: ತಾಯಿ ಮಗ ಸ್ಥಳದಲ್ಲೇ ಸಾವು

0

ಮೂಡಿಗೆರೆ: ತಾಲ್ಲೂಕಿನ ಮುದ್ರೆಮನೆ ಸಮೀಪ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವರಿಗೆ ಗಂಭೀರ ಗಾಯಗಳಾಗಿವೆ. ಸಕಲೇಶಪುರದಿಂದ ಮೂಡಿಗೆರೆಗೆ ಬರುತ್ತಿದ್ದ ಸಾರಿಗೆ ಬಸ್ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆ ಗಂಭೀರ ಗಾಯಗೊಂಡಿದ್ದು ಮೂಡಿಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗುತ್ತಿದೆ. ಮೃತರನ್ನು ಪೂಜಾ ಹಿರೇಮಠ್(42) ಹಾಗೂ ಅವರ ಪುತ್ರ ನಿರಂಜನ(12) ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಶಿವಯೋಗಯ್ಯ ಹಿರೇಮಠ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರ್ಕಳದ ಜ್ಞಾನಸುಧ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ತಮ್ಮ ಹಿರಿಯ ಮಗನನ್ನು ನೋಡಲು ಹೋಗಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version