Home ತಾಜಾ ಸುದ್ದಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ

0

ಹುಬ್ಬಳ್ಳಿ: ಕೇವಲ ೨೦೦ ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್, ೫೪೩ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅತಿಯಾದ ವಿಶ್ವಾಸ ಹೊಂದಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಹೀಗಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಪೊಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ. ಇಂಡಿ ಒಕ್ಕೂಟದಲ್ಲೇ ಹಲವು ಗೊಂದಲಗಳಿವೆ. ಟಿಎಂಸಿ ಪ್ರಣಾಳಿಕೆ, ಆಪ್ ಪ್ರನಾಳಿಕೆ ಹೀಗೆ ಅನೇಕ ಪ್ರಣಾಳಿಕೆಗಳನ್ನು ಹೊಂದಿರುವ ಇಂಡಿ ಒಕ್ಕೂಟವನ್ನು ಜನ ನಂಬುವ ಸ್ಥಿತಿಯಲ್ಲಿಲ್ಲ ಎಂದು ವ್ಯಂಗ್ಯವಾಡಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ೮-೧೦ ತಿಂಗಳ ನಂತರ ಬರ ಪರಿಹಾರ ನೀಡಿದ ಉದಾಹರಣೆಗಳಿವೆ. ನಾಡಿನ ರೈತರು, ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಬೊಕ್ಕಸದಿಂದ ಸಹಾಯ ಮಾಡುವ ಕೆಲಸ ರಾಜ್ಯ ಸರ್ಕಾರ ಆಧ್ಯತೆಯ ಮೇರೆಗೆ ಮಾಡಬೇಕು. ತುರ್ತು ಪರಿಸ್ಥಿತಿ ಎದುರಾದಾಗ ಸಕಾಲಕ್ಕೆ ನೀರು, ಮೇವು ನೀಡಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಆಗ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೇ, ರಾಜ್ಯ ಸರ್ಕಾರದಿಂದಲೇ ತುರ್ತು ಪರಿಹಾರ ನೀಡಿದ್ದೆವು ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಯಾರೂ ಲಾಬಿ ಮಾಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ವ್ಯವಸ್ಥಿತವಾಗಿ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದರು.

Exit mobile version