Home ಅಪರಾಧ ಆನ್‌ಲೈನ್ ವಂಚನೆ: ನದಿಗೆ ಹಾರಿ ಯುವಕ ಆತ್ಮಹತ್ಯೆ

ಆನ್‌ಲೈನ್ ವಂಚನೆ: ನದಿಗೆ ಹಾರಿ ಯುವಕ ಆತ್ಮಹತ್ಯೆ

0

ಮಂಗಳೂರು: ಆನ್‌ಲೈನ್ ಟಾಸ್ಕ್ ನಂಬಿ ಸಾವಿರಾರು ಹಣ ಕಟ್ಟಿದ ಯುವಕನೊಬ್ಬ ವಂಚನೆಗೊಳಗಾಗಿ ಸಾವಿಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಮೂಡುಶೆಡ್ಡೆ ನಿವಾಸಿ ಸೂರ್ಯ(೨೩) ಎಂದು ಗುರುತಿಸಲಾಗಿದೆ. ಮರವೂರಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೂರ್ಯ ಕಳೆದ ಕೆಲವು ದಿನಗಳಿಂದ ಆನ್‌ಲೈನ್ ಆಪ್ ಮೂಲಕ ಹಣ ಹೂಡಿಕೆ ಮಾಡಿದ್ದನು. ಆನ್‌ಲೈನ್‌ನಲ್ಲಿ ನೀಡುವ ಟಾಸ್ಕ್ ಕ್ಲಿಯರ್ ಮಾಡಿದರೆ ಭರ್ಜರಿ ಹಣ ನೀಡುವ ಆಮೀಷ ಒಡ್ಡಿದ್ದರು. ಇದನ್ನು ನಂಬಿದ್ದ ಸೂರ್ಯ ಹಣವನ್ನು ಹೂಡಿಕೆ ಮಾಡಿದ್ದನು. ಆದರೆ ಹಣ ಮರಳಿ ತೆಗೆಯಲು ಇನ್ನಷ್ಟು ಹಣವನ್ನು ಕೇಳಿದ್ದರು. ಆರಂಭದಲ್ಲಿ ೨ ಸಾವಿರ, ಆನಂತರ ೫ ಸಾವಿರ, ೧೫ ಸಾವಿರ ಎಂದು ಗ್ರಾಹಕರಿಗೆ ಹಣ ಹೂಡಿಕೆ ಮಾಡಿ ಅದಕ್ಕೆ ತಕ್ಕಂತೆ ಟಾಸ್ಕ್ ಪೂರೈಸುವ ಬಗ್ಗೆ ಹೇಳಲಾಗುತ್ತದೆ. ಸೂರ್ಯ ತನ್ನಲ್ಲಿ ಹಣ ಇಲ್ಲದಿದ್ದರೂ, ಸ್ನೇಹಿತರಲ್ಲಿ ಸಾಲ ಪಡೆದು ಆನ್‌ಲೈನ್ ಆಟದಲ್ಲಿ ಹೂಡಿಕೆ ಮಾಡುತ್ತಿದ್ದ. ಸೂರ್ಯ ಸಾವಿನ ಬೆನ್ನಲ್ಲೇ ಮೊಬೈಲ್ ಚೆಕ್ ಮಾಡಿದಾಗ, ೮೫ ಸಾವಿರ ರೂ. ಹಣವನ್ನು ಆನ್‌ಲೈನ್ ಗೇಮ್‌ನಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ. ಆದರೆ ಹಣ ಹಿಂತಿರುಗಿ ಬರದೇ ಇದ್ದುದರಿಂದ ಧೃತಿಗೆಟ್ಟ ಯುವಕ ಸೂರ್ಯ ಸಾವಿಗೆ ಶರಣಾಗಿದ್ದಾನೆ.
ಮನೆಯಲ್ಲಿ ತಂಗಿ ಮತ್ತು ತಾಯಿ ಮಾತ್ರ ಇದ್ದರು. ಈತನ ತಂದೆ ಸೂರ್ಯ ಈ ಹಿಂದಯೇ ಗತಿಸಿದ್ದರು. ತಾಯಿ ಕಷ್ಟದಿಂದ ಮಗನನ್ನು ಬೆಳೆಸಿ ಪದವಿ ಓದಿಸಿದ್ದರು. ಮೊನ್ನೆ ದಿಢೀರ್ ಆಗಿ ನಾಪತ್ತೆಯಾಗುತ್ತಲೇ ಸ್ನೇಹಿತರು, ಮನೆಯವರು ಹುಡುಕಾಟ ಆರಂಭಿಸಿದ್ದರು. ಡಿ. ೨೬ರಂದು ಮರವೂರಿನ ಅಣೆಕಟ್ಟಿನ ಸಂದಿನಲ್ಲಿ ಬಾತುಕೊಂಡಿದ್ದ ಯುವಕನ ಶವ ಪತ್ತೆಯಾಗಿತ್ತು. ಮೊಬೈಲ್‌ನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರಿಂದ ಅದನ್ನು ಚೆಕ್ ಮಾಡಿದಾಗ ಆನ್‌ಲೈನ್ ಗೇಮ್ ಮೋಸಕ್ಕೆ ಬಲಿಯಾಗಿದ್ದಾನೆ ಎಂಬುದು ಪತ್ತೆಯಾಗಿದೆ. ಕಾವೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version