Home ತಾಜಾ ಸುದ್ದಿ Namma Metro: ಹಳದಿ ಮಾರ್ಗಕ್ಕೆ 4ನೇ ರೈಲು ಆಗಮನಕ್ಕೆ ದಿನಗಣನೆ

Namma Metro: ಹಳದಿ ಮಾರ್ಗಕ್ಕೆ 4ನೇ ರೈಲು ಆಗಮನಕ್ಕೆ ದಿನಗಣನೆ

0

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಮತ್ತೊಂದು ನಮ್ಮ ಮೆಟ್ರೋ ರೈಲು ಮಾರ್ಗ ಆಗಸ್ಟ್‌ನಲ್ಲಿ ಲೋಕಾರ್ಪಣೆಯಾಗುವುದು ಖಚಿತವಾಗಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರದ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ(ಸಿಎಂಆರ್‌ಎಸ್‌) ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.

ಬಿಎಂಆರ್‌ಸಿಎಲ್‌ ಆರ್.ವಿ.ರಸ್ತೆ-ಬೊಮ್ಮಸಂದ್ರದ ಮಾರ್ಗದಲ್ಲಿ ರೈಲು ಓಡಿಸಲು ರೈಲುಗಳ ಕೊರತೆಯನ್ನು ಎದುರಿಸುತ್ತಿದೆ. ಸದ್ಯ 3 ರೈಲುಗಳಿದ್ದು, ಆಗಸ್ಟ್ ಮೊದಲ ವಾರದಲ್ಲಿ 4ನೇ ರೈಲು ಬೆಂಗಳೂರು ನಗರಕ್ಕೆ ಬರಲಿದೆ.

ಈ ಕುರಿತು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಳದಿ ಮಾರ್ಗದ ಸಂಚಾರಕ್ಕಾಗಿಯೇ 4ನೇ ರೈಲು ಆಗಸ್ಟ್ ಮೊದಲ ವಾರದಲ್ಲಿ ಪೂರೈಕೆಯಾಗಲಿದೆ ಎಂದು ಹೇಳಿದ್ದಾರೆ. ಆಗಸ್ಟ್ 10ರಂದು ರೈಲು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಚಾಲಕ ರಹಿತ ಇಂಜಿನ್ ಹೊಂದಿರುವ ಮೆಟ್ರೋ ರೈಲು ಹಳದಿ ಮಾರ್ಗದಲ್ಲಿ ಸಂಚಾರವನ್ನು ನಡೆಸಲಿವೆ. ಮೂಲ ಮಾದರಿ ರೈಲು 2024ರ ಏಪ್ರಿಲ್‌ನಲ್ಲಿ ನಗರಕ್ಕೆ ಆಗಮಿಸಿತ್ತು. ಇದನ್ನು ಚೀನಾದಿಂದ ತರಲಾಗಿತ್ತು.

2025ರ ಜನವರಿಯಲ್ಲಿ ಕೋಲ್ಕತ್ತಾದಿಂದ 2ನೇ ರೈಲು ಮತ್ತು ಮೇ ತಿಂಗಳಿನಲ್ಲಿ 3ನೇ ರೈಲು ಬೆಂಗಳೂರು ನಗರಕ್ಕೆ ಬಂದಿದೆ. ಈ ರೈಲುಗಳ ಮೂಲಕವೇ ಈಗ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗುತ್ತಿದೆ.

19.15 ಕಿ. ಮೀ. ಹಳದಿ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ(ಸಿಎಂಆರ್‌ಎಸ್‌) ಅಧಿಕಾರಿಗಳ ತಂಡ ಮಂಗಳವಾರದಿಂದ ಪರಿಶೀಲನೆ ಆರಂಭಿಸಿದೆ. ಜುಲೈ 25ಕ್ಕೆ ಪರಿಶೀಲನೆ ಪೂರ್ಣಗೊಳ್ಳಲಿದ್ದು, ಆಯುಕ್ತರು ಪ್ರಮಾಣ ಪತ್ರ ನೀಡಿದ ಬಳಿಕ ವಾಣಿಜ್ಯ ಸಂಚಾರ ಆರಂಭಕ್ಕೆ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ.

ರೈಲು ಸಂಚಾರದ ಗರಿಷ್ಠ ವೇಗ, ಕನಿಷ್ಠ ವೇಗ, ಎಷ್ಟು ಭಾರ ಹೊತ್ತೊಯ್ಯಬಹುದು ಮುಂತಾದ ಅಂಶಗಳನ್ನು ಆಯುಕ್ತರು ತಿಳಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆ ಚರ್ಚಿಸಿದ ಬಳಿಕ ರೈಲು ಸಂಚಾರದ ದಿನಾಂಕ ನಿಗದಿ ಮಾಡಲಾಗುತ್ತದೆ.

15 ರೈಲುಗಳು ಬೇಕು: ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ 15ರಿಂದ ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾಗಲಿದೆ. 16 ನಿಲ್ದಾಣಗಳನ್ನು ಮಾತ್ರ ಈಗ ರೈಲು ಸಂಪರ್ಕಿಸಲಿದೆ. ಬೆಳಗ್ಗೆ 5 ರಿಂದ ರಾತ್ರಿ 11ರ ತನಕ ಪ್ರತಿ 15 ನಿಮಿಷಕ್ಕೆ ಒಂದು ರೈಲು ಓಡಿಸಲು ಯೋಜನೆ ರೂಪಿಸಲಾಗಿದೆ.

ಪ್ರತಿ ದಿನ 30-40 ಟ್ರಿಪ್ ರೈಲುಗಳು ಓಡಲಿದ್ದು, 25 ಸಾವಿರ ಜನರು ಸಂಚಾರ ನಡೆಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಸಂಪೂರ್ಣ ಹಳದಿ ಮಾರ್ಗ 2026ರಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ಬಿಎಂಆರ್‌ಸಿಎಲ್ ಅಧಿಕಾರಿಗಳು, ಸಂಪೂರ್ಣ ಹಳದಿ ಮಾರ್ಗ ಸಂಚಾರಕ್ಕೆ ಮಕ್ತವಾದರೆ 1.5 ಲಕ್ಷ ಪ್ರಯಾಣಿಕರು ಮತ್ತು 60 ಲಕ್ಷ ಆದಾಯ ಬರಲಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ. ಸಂಪೂರ್ಣ ಮಾರ್ಗದಲ್ಲಿ ಸಂಚಾರಕ್ಕೆ 15 ರೈಲುಗಳು ಬೇಕು. ಈಗ 3 ರೈಲುಗಳಿದ್ದು, ಇನ್ನೊಂದು ರೈಲು ಆಗಸ್ಟ್‌ ಮೊದಲ ವಾರ ಬರಲಿದೆ.

16 ನಿಲ್ದಾಣಗಳಲ್ಲಿ ಕಾರ್ಯಾಚರಣೆ ಮಾಡುವುದೋ?, 7 ನಿಲ್ದಾಣಗಳಲ್ಲಿ ಕಾರ್ಯಾಚರಣೆ ಮಾಡುವುದೋ? ಎಂದು ಅಧಿಕಾರಿಗಳು ಇನ್ನೂ ತೀರ್ಮಾನ ಮಾಡಿಲ್ಲ. ರಾಜ್ಯ ಸರ್ಕಾರ ಯಾವ ಸೂಚನೆ ನೀಡಲಿದೆ? ಎಂದು ಕಾಯಲಾಗುತ್ತಿದೆ.

ಕೇವಲ 7 ನಿಲ್ದಾಣಗಳು ಎಂದರೆ ರೈಲುಗಳ ಸಂಚಾರದ ಅವಧಿಯನ್ನು ಹೆಚ್ಚಿಸಬಹುದು. ಆದರೆ ಜನರನ್ನು ನಿಯಂತ್ರಣ ಮಾಡುವುದು, 7 ನಿಲ್ದಾಣದ ಬಳಿಕ ಜನರು ಮುಂದೆ ಸಾಗುವುದು ಹೇಗೆ? ಎಂಬುದು ಪ್ರಶ್ನೆಯಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version