Home ತಾಜಾ ಸುದ್ದಿ Namma Metro: ಹಳದಿ ಮಾರ್ಗದಲ್ಲಿ ರೈಲು ಓಡಲು ಬೇಕಿದೆ ಅಂತಿಮ ಒಪ್ಪಿಗೆ

Namma Metro: ಹಳದಿ ಮಾರ್ಗದಲ್ಲಿ ರೈಲು ಓಡಲು ಬೇಕಿದೆ ಅಂತಿಮ ಒಪ್ಪಿಗೆ

0

ಬೆಂಗಳೂರು: ಬೆಂಗಳೂರು ನಗರದಲ್ಲಿ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರ ಯಾವಾಗ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸರ್ಕಾರ, ಬಿಎಂಆರ್‌ಸಿಎಲ್ ನೀಡಿದ ಎಲ್ಲಾ ಗಡುವು ಮುಗಿದು ಹೋಗಿದೆ.

ಐಟಿ ಕಂಪನಿಗಳನ್ನು ಸಂಪರ್ಕಿಸುವ ಹಳದಿ ಮಾರ್ಗವು 18.8 ಕಿ.ಮೀ. ಉದ್ದವಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಟೆಕ್ಕಿಗಳಿಗೆ ಅನುಕೂಲವಾಗಲಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಸುಮಾರು 3 ಲಕ್ಷ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸಹ ರೈಲು ಸಂಚಾರ ಆರಂಭವಾಗಿಲ್ಲ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲು ಓಡಿಸಬೇಕು ಎಂಬುದು ಬಿಎಂಆರ್‌ಸಿಎಲ್ ತೀರ್ಮಾನವಾಗಿದೆ. ಆದ್ದರಿಂದ ಇಂಡಿಪೆಂಡೆಂಟ್‌ ಸೇಫ್ಟಿ ಅಸೆಸ್ಸರ್‌ (ಐಎಸ್‌ಎ) ಪ್ರಮಾಣ ಪತ್ರ ಅಗತ್ಯವಿದೆ.

ಕೊನೆಯ ಹಂತದಲ್ಲಿ ಪ್ರಕ್ರಿಯೆ: ಸದ್ಯದ ಮಾಹಿತಿಗಳ ಪ್ರಕಾರ ಐಎಸ್‌ಎ ಪ್ರಮಾಣ ಪತ್ರವನ್ನು ನೀಡಲು ಎಲ್ಲಾ ದಾಖಲೆ, ಅಂಕಿ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಈ ಪ್ರಮಾಣ ಪತ್ರ ಕೆಲವೇ ದಿನಗಳಲ್ಲಿ ಬಿಎಂಆರ್‌ಸಿಎಲ್ ಕೈ ಸೇರಲಿದೆ. ಆ ನಂತರ ರೈಲ್ವೆಯ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಮಾರ್ಗವನ್ನು ಪರಿಶೀಲನೆ ನಡೆಸಿ, ರೈಲುಗಳ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಬೇಕಿದೆ.

ಐಎಸ್‌ಎ ಪ್ರಮಾಣ ಪತ್ರ ಪಡೆಯುವುದು ಅಂತಿಮ ಪ್ರಕ್ರಿಯೆಯಾಗಿದೆ. ಯಾವುದೇ ದಿನದಲ್ಲಿ ಈ ಪ್ರಮಾಣ ಪತ್ರ ಬಿಎಂಆರ್‌ಸಿಎಲ್ ಕೈ ಸೇರಲಿದೆ. ಈ ಪ್ರಮಾಣ ಪತ್ರ ಸಿಗುತ್ತಿದ್ದಂತೆಯೇ ಬಿಎಂಆರ್‌ಸಿಎಲ್ ಸಿಎಂಆರ್‌ಎಸ್ ಪರಿಶೀಲನೆಗೆ ಆಹ್ವಾನವನ್ನು ನೀಡಲಿದೆ.

ಆಗಸ್ಟ್‌ 15ಕ್ಕೆ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಈಗಾಗಲೇ ಹೇಳಿದೆ. ಆದರೆ ಅಷ್ಟರೊಳಗೆ ವಿವಿಧ ಪ್ರಕ್ರಿಯೆ ಪೂರ್ಣಗೊಳ್ಳಲಿದೆಯೇ? ಕಾದು ನೋಡಬೇಕಿದೆ.

ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದರೂ ರೈಲುಗಳ ಕೊರತೆ ಕಾರಣ ಈಗಿರುವ ಹಸಿರು, ನೇರಳೆ ಮಾರ್ಗದಂತೆ ರೈಲುಗಳನ್ನು ಓಡಿಸಲು ಸಾಧ್ಯವಿಲ್ಲ. ರೈಲುಗಳು ಅಕ್ಟೋಬರ್, ನವೆಂಬರ್‌ ವೇಳೆಗೆ ನಗರಕ್ಕೆ ಬರಲಿದ್ದು, ಆಗ ಪೂರ್ಣ ಮಟ್ಟದಲ್ಲಿ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.

ಬೆಂಗಳೂರು ದಕ್ಷಿಣವನ್ನು ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಪ್ರಮುಖ ಮಾರ್ಗ ಇದಾಗಿದ್ದು, ಈ ಮಾರ್ಗದಲ್ಲಿ ಸಂಚಾರ ನಡೆಸುವ ರೈಲುಗಳನ್ನು ಪಶ್ಚಿಮ ಬಂಗಾಳದಲ್ಲಿರುವ ಟಿಟಾಗಢ ರೈಲು ಸಿಸ್ಟಂ ಲಿಮಿಟೆಡ್ ಪೂರೈಕೆ ಮಾಡಬೇಕಿದೆ. ರೈಲು ಸಂಚಾರ ಆರಂಭಗೊಳ್ಳು ಇನ್ನೂ ಕನಿಷ್ಠ ಮೂರು ರೈಲುಗಳ ಅಗತ್ಯವಿದೆ.

ಈ ಮಾರ್ಗದಲ್ಲಿ ಪ್ರತಿ 15 ನಿಮಿಷಕ್ಕೆ ಒಂದು ರೈಲು ಓಡಿಸಲು 8 ರೈಲುಗಳು, ಅರ್ಧ ಗಂಟೆಗೆ ಒಂದು ರೈಲು ಓಡಿಸಲು ಮೂರು ರೈಲುಗಳು ಬೇಕಿದೆ. ಟಿಟಾಗಢನಲ್ಲಿ 36 ರೈಲುಗಳನ್ನು ತಯಾರು ಮಾಡಲಾಗುತ್ತಿದೆ. ಇದರಲ್ಲಿ ಎರಡು ರೈಲುಗಳು ಮಾತ್ರ ನಗರಕ್ಕೆ ಬಂದಿವೆ.

ಎಲ್ಲಾ ಪ್ರಮಾಣ ಪತ್ರಗಳು ಸಿಕ್ಕಿದರೆ ಪ್ರತಿ ಅರ್ಧಗಂಟೆಗೊಂದು ರೈಲನ್ನು ಓಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಆಗ ಸುಮಾರು 50 ಸಾವಿರ ಜನರು ಸಂಚಾರ ನಡೆಸಬಹುದು ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್‌ನಲ್ಲಿ ಮೆಟ್ರೋ ರೈಲು ಸಂಚಾರವನ್ನು ನಡೆಸಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version